ADVERTISEMENT

ಉದ್ಯಮಿ ಅಪಹರಿಸಿ ₹6.50 ಕೋಟಿ ಕಿತ್ತ ಪ್ರಕರಣ ಸಿಸಿಬಿಗೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:47 IST
Last Updated 25 ಜುಲೈ 2019, 19:47 IST

ಬೆಂಗಳೂರು: ಹುಳಿಮಾವು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಉದ್ಯಮಿ ಮುನಿಯಪ್ಪ (60) ಎಂಬುವವರ ‍ಅಪಹರಣ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ.

‘ಅಪಹರಣ ಸಂಬಂಧ ನಾಯಂಡನಹಳ್ಳಿ ನಿವಾಸಿ ಮುನಿಯಪ್ಪ ನೀಡಿರುವ ದೂರಿನನ್ವಯ ಪರಿಚಯಸ್ಥ ಗೋಪಾಲ್‌ ಹಾಗೂ ಇತರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ತನಿಖೆಗೆ ಇನ್‌ಸ್ಪೆಕ್ಟರ್‌ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

ದೂರಿನ ವಿವರ: ‘ಜೂನ್ 19ರಂದು ಬೆಳಿಗ್ಗೆ ನಾಲ್ವರು ದುಷ್ಕರ್ಮಿಗಳು, ಚಾಕು ಹಾಗೂ ಮಚ್ಚು ತೋರಿಸಿ ಅಪಹರಿಸಿದ್ದರು. ಮೈಸೂರಿಗೆ ಕರೆದೊಯ್ದು, ಮನೆಯೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟಿದ್ದರು’ ಎಂದು ದೂರಿನಲ್ಲಿ ಮುನಿಯಪ್ಪ ತಿಳಿಸಿದ್ದಾರೆ.

ADVERTISEMENT

‘ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ದುಷ್ಕರ್ಮಿಗಳು,‌‘ನಿನ್ನ ಬಳಿ ₹300 ಕೋಟಿ ಇದೆಯಂತೆ. ನಮಗೆ ₹10 ಕೋಟಿ ಕೊಡು. ಇಲ್ಲದಿದ್ದರೆ ಕಾರು ಸಮೇತ ಡ್ಯಾಂಗೆ ಎಸೆದು ಬಿಡುತ್ತೇವೆ’ ಎಂದು ಬೆದರಿಸಿದ್ದರು. ‘ಯಾರಿಗೆ ಹೇಳಿದರೆ ಹಣ ತಂದುಕೊಡುತ್ತಾರೆ’ ಎಂದು ಕೇಳಿದ್ದರು. ಆಗ ನಾನು, ಪರಿಚಯಸ್ಥ ಜಿ.ಟಿ.ಗೋಪಾಲ ಹೆಸರು ಹೇಳಿದ್ದೆ.’

‘ಗೋಪಾಲ್‌ಗೆ ಕರೆ ಮಾಡಿ ಮಾತನಾಡಲು ಮೊಬೈಲ್‌ ನನಗೆ ಕೊಟ್ಟಿದ್ದ ದುಷ್ಕರ್ಮಿಗಳು, ₹10 ಕೋಟಿ ತಂದುಕೊಡುವಂತೆ ಹೇಳಿಸಿದ್ದರು. ನಂತರ ಕಾರಿನಲ್ಲಿ ಬೆಂಗಳೂರಿಗೆ ಕರೆತಂದ ದುಷ್ಕರ್ಮಿಗಳು, ‘ನಮಗೆ ಹಣ ಬಂದಿದೆ’ ಎಂದು ಹೇಳಿ ರಾಜರಾಜೇಶ್ವರಿನಗರದಲ್ಲಿ ಬಿಟ್ಟು ಹೋದರು. ಸ್ಥಳಕ್ಕೆ ಬಂದಿದ್ದ ಗೋಪಾಲ್, ನನ್ನನ್ನು ಕಾರಿನಲ್ಲಿ ಮನೆಗೆ ಬಿಟ್ಟರು’ ಎಂದು ದೂರಿನಲ್ಲಿ ಹೇಳಿದ್ದಾರೆ.

‘ಸಾಲ ಮಾಡಿ ಹಣವನ್ನು ಅಪಹರಣಕಾರರಿಗೆ ಕೊಟ್ಟಿರುವುದಾಗಿ ಹೇಳುತ್ತಿದ್ದ ಗೋಪಾಲ್, ಹಣ ವಾಪಸ್ ನೀಡುವಂತೆ ಕೇಳಲಾರಂಭಿಸಿದ್ದ. ಸಾಲ ಮಾಡಿ ಆತನಿಗೆ ₹6.50 ಕೋಟಿ ಕೊಟ್ಟಿದ್ದೆ. ಉಳಿದ ₹3.50 ಕೋಟಿ ನೀಡುವಂತೆಯೂ ಹಿಂದೆ ಬಿದ್ದಿದ್ದ. ಈಗ ಆತನೇ ನನ್ನನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿಸಿ ಹಣ ಕಿತ್ತಿರುವುದು ಗೊತ್ತಾಗಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ದೂರಿನಲ್ಲಿ ಮುನಿಯಪ್ಪ ಒತ್ತಾಯಿಸಿದ್ದಾರೆ.

‘ಮುತ್ತಪ್ಪ ರೈ ಹೆಸರು ಹೇಳಿದ್ದ ಆರೋಪಿ’

‘ಅಪಹರಣಕಾರರು ಬಿಟ್ಟು ಹೋದ ನಂತರ ಮುನಿಯಪ್ಪ ಅವರನ್ನು ಕರೆತರಲು ಹೋಗಿದ್ದ ಗೋಪಾಲ್, ‘ದುಡ್ಡು ಹೋದರೆ ಹೋಗಲಿ, ಜೀವ ಉಳಿಯಿತು’ ಎಂದು ಸಮಾಧಾನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘ನನ್ನನ್ನು ಅಪಹರಿಸಿದ್ದು ಯಾರು’ ಎಂದು ಮುನಿಯಪ್ಪ ಪ್ರಶ್ನಿಸಿದ್ದರು. ‘ಮುತ್ತಪ್ಪ ರೈ ಕಡೆಯವರೆಂದು ಹೇಳಿ ಹಣ ಪಡೆದುಕೊಂಡು ಹೋದರು’ ಎಂದು ಗೋಪಾಲ್‌ ಉತ್ತರಿಸಿದ್ದ. ತಾನು ಅಮಾಯಕನೆಂದು ತೋರಿಸಿಕೊಳ್ಳಲು ಆರೋಪಿ, ಮುತ್ತಪ್ಪ ರೈ ಹೆಸರು ಬಳಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.