ADVERTISEMENT

‘ಬೈಕಾಯಿನ್’ ಆ್ಯಪ್: ₹ 14 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 15:59 IST
Last Updated 4 ಜೂನ್ 2022, 15:59 IST

ಬೆಂಗಳೂರು: ‘ಬೈಕಾಯಿನ್’ ಷೇರು ವ್ಯವಹಾರ ಆ್ಯಪ್‌ನಲ್ಲಿ ₹ 14 ಲಕ್ಷ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದ್ದು, ಈ ಬಗ್ಗೆ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪದ್ಮನಾಭನಗರ ನಿವಾಸಿ ಯೋಗೀಶ್‌ಕುಮಾರ್ ಎಂಬುವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಫೇಸ್‌ಬುಕ್‌ ಸಾಮಾಜಿಕ ಮಾಧ್ಯಮದಲ್ಲಿ ಖಾತೆ ಹೊಂದಿರುವ ಯೋಗೀಶ್, ಬೈ ಕಾಯಿನ್ ಆ್ಯಪ್ ಬಗ್ಗೆ ಜಾಹೀರಾತು ನೋಡಿದ್ದರು. ಅದರಲ್ಲಿದ್ದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿ, ಹೂಡಿಕೆ ಬಗ್ಗೆ ವಿಚಾರಿಸಿದ್ದರು.’

ADVERTISEMENT

‘ಆ್ಯಪ್ ಕಂಪನಿ ಪ್ರತಿನಿಧಿ ಸೋಗಿನಲ್ಲಿ ಮಾತನಾಡಿದ್ದ ಸೈಮನ್ ಎಂಬಾತ, ‘ ಆನ್‌ಲೈನ್‌ನಲ್ಲಿ ‘ಬಿನ್ಯಾನ್ಸ್’ ಖಾತೆ ತೆರೆಯಬೇಕು. ನಂತರ, ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡಲಾಗುವುದು’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 14 ಲಕ್ಷ ನೀಡಿದ್ದರು. ಯಾವುದೇ ಲಾಭ ನೀಡದ ಕಂಪನಿಯವರು, ಶುಲ್ಕದ ಹೆಸರಿನಲ್ಲಿ ಮತ್ತಷ್ಟು ಹಣ ಕೇಳಿದ್ದರು. ಅವಾಗಲೇ ದೂರುದಾರನಿಗೆ ಅನುಮಾನ ಬಂದಿತ್ತು’ ಎಂದು ತಿಳಿಸಿದರು.

‘ದೂರುದಾರ ಫೋನ್‌ ಪೇ ಮೂಲಕವೇ ಹಣ ಜಮೆ ಮಾಡಿದ್ದರು. ಹಣ ಸ್ವೀಕರಿಸಿದ್ದ ಖಾತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.