ADVERTISEMENT

ನೀರಿನ ಸಮಸ್ಯೆ ಪರಿಹಾರಕ್ಕೆ ಜಲಮಂಡಳಿ–ಐಐಎಸ್‌ಸಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:38 IST
Last Updated 29 ಸೆಪ್ಟೆಂಬರ್ 2019, 19:38 IST

ಬೆಂಗಳೂರು:ನಗರದ ನೀರಿನ ಸಮಸ್ಯೆ ಮತ್ತು ಸವಾಲುಗಳಿಗೆ ಸಮಗ್ರ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜಲಮಂಡಳಿಯು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ವಿವಿಧ ತಾಂತ್ರಿಕ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಐಐಎಸ್‌ಸಿ, ಬೆಂಗಳೂರು ವಾಟರ್‌ ಸಲ್ಯೂಷನ್‌ ಲ್ಯಾಬ್‌ (ಡಬ್ಲ್ಯುಎಸ್‌ಎಲ್‌ಬಿ), ಹವಾಮಾನ ಬದಲಾವಣೆಗಾಗಿನ ದಿವೇಚಾ ಕೇಂದ್ರದೊಂದಿಗಿನ ಈ ಒಪ್ಪಂದಕ್ಕೆ ಜಲಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಸೆ.25ರಂದು ಸಹಿ ಹಾಕಿದ್ದಾರೆ. ಈ ಒಪ್ಪಂದದಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಲ್ಲ. ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ದತ್ತಾಂಶಗಳನ್ನು ಜಲಮಂಡಳಿಯು ಈ ಕೇಂದ್ರದ ವಿಜ್ಞಾನಿಗಳಿಗೆ ನೀಡಿದರೆ, ಅದಕ್ಕೆ ಸೂಕ್ತ ಪರಿಹಾರಾತ್ಮಕ ಸಲಹೆಗಳನ್ನು ನೀಡುವ ಕಾರ್ಯವನ್ನು ಈ ಕೇಂದ್ರಗಳು ಮಾಡಲಿವೆ. ವಿಜ್ಞಾನಿಗಳ ಕೈಗೊಳ್ಳುವ ಸಂಶೋಧನಾ ಕಾರ್ಯಗಳಿಗೆ ತಗುಲುವ ವೆಚ್ಚವನ್ನು ಭೂವಿಜ್ಞಾನ ಸಚಿವಾಲಯ ಭರಿಸಲಿದೆ.

ನೈಜ ಜಲಸಂರಕ್ಷಣೆ ಸೂಚ್ಯಂಕ ತಯಾರಿಸುವ ಕಾರ್ಯವನ್ನು ವಿಜ್ಞಾನಿಗಳು ಮಾಡಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳು ತಯಾರಿಸಲಿರುವ ಈ ಸೂಚ್ಯಂಕವು ನಗರದಲ್ಲಿನ ಕೆರೆಗಳು, ಅಂತರ್ಜಲದ ಮಟ್ಟ ಸೇರಿದಂತೆ ಸಂಪೂರ್ಣ ಜಲ ಸಂಪನ್ಮೂಲದ ಚಿತ್ರಣವನ್ನು ನೀಡಲಿದೆ. ಅಲ್ಲದೆ, ಶುದ್ಧೀಕರಿಸಿದ ಮಲಿನ ನೀರಿನ ಮಾರಾಟದ ಕುರಿತು ಸೂಚ್ಯಂಕ ತಿಳಿಸಲಿದೆ.

ADVERTISEMENT

‘ಸಮಸ್ಯೆಗೆ ವೈಜ್ಞಾನಿಕ ಪರಿಹಾರ’

‘ನೀರು ಸಂರಕ್ಷಣೆ ಸೂಚ್ಯಂಕ, ಜಲಮಂಡಳಿಯನ್ನು ಹೇಗೆ ಬಲಪಡಿಸಬೇಕು, ತ್ಯಾಜ್ಯ ನೀರು ನಿರ್ವಹಣೆ ಮತ್ತು ಮಾರಾಟ ಹೇಗೆ ಮಾಡಬೇಕು ಎಂಬ ಅಂಶಗಳನ್ನು ಇಟ್ಟುಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ತುಷಾರ್‌ ಗಿರಿನಾಥ್‌ ‘ಪ್ರಜಾವಾಣಿ’ಗೆ ಹೇಳಿದರು.

‘ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನಿಗಳ ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದಾರೆ. ಜಲ ತಜ್ಞರು, ಸಂಶೋಧಕರು ಸಂಶೋಧನೆ ನಡೆಸಲಿದ್ದಾರೆ. ವೈಜ್ಞಾನಿಕ ಪರಿಹಾರಗಳನ್ನು ಅವರು ಸೂಚಿಸಲಿದ್ದಾರೆ. ಮಂಡಳಿಯ ಇತಿ–ಮಿತಿಯಲ್ಲಿ ಇವುಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.