ADVERTISEMENT

ಬೆನ್ನಿಗಾನಹಳ್ಳಿ ವಾರ್ಡ್‌: ಜನರಿಗೆ 6 ತಿಂಗಳಿಂದ ದುರ್ವಾಸನೆ ಶಿಕ್ಷೆ!

ಆಮೆಗತಿಯಲ್ಲಿ ಒಳಚರಂಡಿ ಪೈಪ್‌ ಅಳವಡಿಕೆ ಕಾಮಗಾರಿ * ಸದಾನಂದನಗರ ನಿವಾಸಿಗಳಿಗಿಲ್ಲ ಆನಂದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 1:46 IST
Last Updated 24 ಜನವರಿ 2021, 1:46 IST
ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಬೈಯಪ್ಪನಹಳ್ಳಿ ರೈಲ್ವೆ ಹಳಿ ಬಳಿ ಕೊಳಚೆ ನೀರು ಸಂಗ್ರಹವಾಗಿರುವುದು
ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಬೈಯಪ್ಪನಹಳ್ಳಿ ರೈಲ್ವೆ ಹಳಿ ಬಳಿ ಕೊಳಚೆ ನೀರು ಸಂಗ್ರಹವಾಗಿರುವುದು   

ಬೆಂಗಳೂರು: ಬಿಬಿಎಂಪಿಯ ಬೆನ್ನಿಗಾನಹಳ್ಳಿ ವಾರ್ಡ್‌ (50) ವ್ಯಾಪ್ತಿಯಲ್ಲಿರುವ ಸದಾನಂದನಗರದ ನಿವಾಸಿಗಳು ಸುಮಾರು 6 ತಿಂಗಳಿನಿಂದ ಕೊಳಚೆ ನೀರಿನ ದುರ್ವಾಸನೆ ಸಹಿಸಿಕೊಂಡು ಬದುಕುತ್ತಿದ್ದಾರೆ. ಈ ಬಗ್ಗೆ ಜಲಮಂಡಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

‘ಆರು ತಿಂಗಳ ಹಿಂದೆ, ಒಳಚರಂಡಿಯ ಹಳೆಯ ಪೈಪ್‌ಗಳನ್ನು ತೆಗೆದು, ಹೊಸ ಪೈಪ್‌ಗಳನ್ನು ಹಾಕುವ ಕಾಮಗಾರಿಯನ್ನು ಜಲಮಂಡಳಿ ಕೈಗೆತ್ತಿಕೊಂಡಿದೆ. ಈ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಳಚರಂಡಿಗಳಲ್ಲಿ ಕಲುಷಿತ ನೀರು ಸರಾಗವಾಗಿ ಹರಿಯದೆ ಕಟ್ಟಿಕೊಂಡಿದೆ. ಆರು ತಿಂಗಳಿನಿಂದ ದುರ್ವಾಸನೆ ಸಹಿಸಿಕೊಂಡೇ ಇರಬೇಕಾಗಿದೆ’ ಎಂದು ಸದಾನಂದನಗರ ನಿವಾಸಿ ಕೆ. ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿಧಾನವಾಗಿಯಾದರೂ ನಡೆಯುತ್ತಿದ್ದ ಕಾಮಗಾರಿ ಈಗ 20 ದಿನಗಳಿಂದ ಸಂಪೂರ್ಣ ಸ್ಥಗಿತವಾಗಿ ಬಿಟ್ಟಿದೆ. ಮನೆ ಮುಂದೆಯೇ ಕಲುಷಿತನೀರು ನಿಂತಿದ್ದು ತುಂಬಾ ಸಮಸ್ಯೆಯಾಗುತ್ತಿದೆ. ಸೊಳ್ಳೆ, ನುಸಿಗಳು ಹೆಚ್ಚುತ್ತಿವೆ’ ಎಂದು ಅವರು ಅಳಲು ತೋಡಿಕೊಂಡರು.

ADVERTISEMENT

‘ಮಳೆ ನೀರು ಕಾಲುವೆ ಜೊತೆಗೆ, ಒಳಚರಂಡಿ ನೀರು ಕೂಡ ಸೇರಿಕೊಳ್ಳುತ್ತಿದೆ. ಬಿಬಿಎಂಪಿ ಆಗಲಿ, ಜಲಮಂಡಳಿ ಆಗಲಿ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸಮಸ್ಯೆಗಳೆಲ್ಲ ಗಮನಕ್ಕೆ ಬರುವುದೇ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ಹಳಿ ಬಳಿ ಸ್ಥಗಿತ

ಕೃಷ್ಣಯ್ಯನ ಪಾಳ್ಯ ಬದಿಯಿಂದ ಒಂದೆಡೆ, ಹಳೆಯ ಮದ್ರಾಸ್‌ ರಸ್ತೆ ಬದಿಯಿಂದ ಇನ್ನೊಂದೆಡೆ ಕಾಮಗಾರಿ ಮುಂದುವರಿದುಕೊಂಡು ಬಂದಿದೆ. ಆದರೆ, ಸದಾನಂದನಗರ ಬಳಿ ಸ್ಥಗಿತಗೊಂಡಿದೆ. ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಹಳಿಯ ಮಾರ್ಗವಾಗಿ ಈ ದೊಡ್ಡ ಪೈಪ್‌ಗಳನ್ನು ಅಳವಡಿಸಬೇಕಾಗಿದೆ.

‘ಜಲಮಂಡಳಿಯು ಯಾವುದೇ ಪೂರ್ವಯೋಜನೆ ಇಲ್ಲದೆ ಈ ಕಾಮಗಾರಿ ಕೈಗೆತ್ತಿಕೊಂಡಂತಿದೆ. ಒಂದು ಕಡೆಯಿಂದ ಕೆಲಸ ಪ್ರಾರಂಭಿಸಿ ಹಂತ–ಹಂತವಾಗಿ ಮುಗಿಸಬೇಕಿತ್ತು. ಈಗ ಎಲ್ಲ ಕಡೆ ಪೈಪ್‌ಗಳನ್ನು ಹಾಕಿ, ಅದಕ್ಕೆ ಒಳಚರಂಡಿ ಸಂಪರ್ಕ ನೀಡದೇ ಹಾಗೆಯೇ ಬಿಟ್ಟಿದ್ದಾರೆ. ಮಳೆ ಬಂದಾಗ ಆ ನೀರಿನ ಜೊತೆಗೆ, ಕೊಳಚೆ ನೀರು ಕೂಡ ಸೇರಿ ರಸ್ತೆಯ ಮೇಲೆ ಹರಿಯುತ್ತದೆ’ ಎಂದು ನಿವಾಸಿಗಳು ದೂರುತ್ತಾರೆ.bw

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.