ಬೈರತಿ ಬಸವರಾಜ್, ಬಿಕ್ಲು ಶಿವ
ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ಪೊಲೀಸರು ನೀಡಿರುವ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಕದ ತಟ್ಟಿದ್ದಾರೆ.
ಈ ಕುರಿತ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಕೋರಿ ಬೈರತಿ ಬಸವರಾಜ್ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠಕ್ಕೆ ಶುಕ್ರವಾರ ಬೆಳಿಗ್ಗೆ ಮೆಮೊ ಸಲ್ಲಿಸಿದರು.
ಈ ಮನವಿಗೆ ರಾಜ್ಯ ಪ್ರಾಸಿಕ್ಯೂಟರ್ ಬಿ.ಎ.ಬೆಳ್ಳಿಯಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ಅರ್ಜಿದಾರರು ತಮಗೆ ನೋಟಿಸ್ ನೀಡಿದ್ದನ್ನೇ ಪ್ರಶ್ನಿಸಿ ಹೈಕೋರ್ಟ್ ಗೆ ಬಂದಿದ್ದಾರೆ. ಈ ಪ್ರಕರಣದ ತುರ್ತು ವಿಚಾರಣೆ ಅಗತ್ಯವಿಲ್ಲ" ಎಂದು ಪ್ರತಿಪಾದಿಸಿದರು.
ಇದನ್ನು ಒಪ್ಪದ ಚೌಟ, "ನಮ್ಮ ಅರ್ಜಿಯಲ್ಲೇನಿದೆ ಎಂಬುದನ್ನು ತಿಳಿಯುವ ಮೊದಲೇ ಪ್ರಾಸಿಕ್ಯೂಟರ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ತುರ್ತು ವಿಚಾರಣೆ ಕೋರಿಕೆಗೆ ಈ ರೀತಿಯ ಆಕ್ಷೇಪ ಸರಿಯಲ್ಲ. ಬೈರತಿ ಬಸವರಾಜ್ ವಿರುದ್ಧದ ಎಫ್‌ಐಆರ್ ನಲ್ಲಿ ಹುರುಳಿಲ್ಲ. ದೂರುದಾರರು ಬೈರತಿ ಬಸವರಾಜ್ ಹೆಸರನ್ನೇ ಎಲ್ಲೂ ಹೇಳಿಲ್ಲ. ಹೀಗೆಂದು ಕೊಲೆಯಾದ ವ್ಯಕ್ತಿಯ ತಾಯಿಯೇ ಸ್ಪಷ್ಟಪಡಿಸಿದ್ದಾರೆ. ಆದರೂ, ಎಫ್‌ಐಆರ್ ನಲ್ಲಿ ಅವರ ಹೆಸರು ಸೇರಿಸಲಾಗಿದೆ" ಎಂದು ದೂರಿದರು.
ಇದನ್ನು ಆಲಿಸಿದ ನ್ಯಾಯಪೀಠ ಮಧ್ಯಾಹ್ನ 2.30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.