ADVERTISEMENT

ಜಾರ್ಜ್‌ ವಿರುದ್ಧ ಇ.ಡಿ ಗೆ ದೂರು

ಅಕ್ರಮ ಹಣ ವರ್ಗಾವಣೆ ಮತ್ತು ಆಸ್ತಿ ಮಾಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 18:33 IST
Last Updated 6 ಸೆಪ್ಟೆಂಬರ್ 2019, 18:33 IST

ಬೆಂಗಳೂರು: ‘ಕೆ.ಜೆ. ಜಾರ್ಜ್ ಅವರು ಸಚಿವರಾಗಿದ್ದಾಗ ದೇಶ– ವಿದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿಯು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದೆ.

ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ದೀಪಕ್‌ ರೆಡ್ಡಿ ನೇತೃತ್ವದ ನಿಯೋಗ, ಇ.ಡಿ ಅಧಿಕಾರಿ
ಗಳಿಗೆ ಸಲ್ಲಿಸಿರುವ ನಾಲ್ಕು ಪುಟಗಳ ದೂರಿನಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ಜಾರ್ಜ್ ಭಾರಿ ಪ್ರಮಾಣದ ಆಸ್ತಿ ಹೊಂದಿದ್ದಾರೆ ಎಂದು ಆರೋಪಿಸಿದೆ.

ನ್ಯೂಯಾರ್ಕ್‌ನ ಮ್ಯಾನ್‌ ಹಟನ್‌ನ ಲಫಯೇಟ್‌ ಸ್ಟ್ರೀಟ್‌ನಲ್ಲಿರುವ ಕೆಲವು ಆಸ್ತಿಗಳೂ ಸೇರಿದಂತೆ ಅನೇಕ ಆಸ್ತಿಗಳನ್ನು ದೂರಿನಲ್ಲಿ ಪಟ್ಟಿ ಮಾಡಲಾಗಿದೆ. ಜಾರ್ಜ್‌ ಅವರ ಮಗಳು ರೇನಿತಾ ಅಬ್ರಹಾಂ ಮತ್ತು ಕೆವಿನ್‌ ಅಬ್ರಹಾಂ ನ್ಯೂಯಾರ್ಕಿನಲ್ಲಿದ್ದು, ಅವರ ಹೆಸರಿನಲ್ಲಿ ಈ ಆಸ್ತಿಗಳನ್ನು ಖರೀದಿಸಲಾಗಿದೆ. ಈ ಆಸ್ತಿಗಳ ಮೌಲ್ಯ ಹತ್ತಾರು ಕೋಟಿಗಳಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ADVERTISEMENT

ಪ್ರತಿಯೊಂದಕ್ಕೂ ಲೆಕ್ಕ ಇಡಲಾಗಿದೆ

‘ನಾನು ಕಾನೂನು ಪಾಲನೆ ಮಾಡುವ ವ್ಯಕ್ತಿ. ನನ್ನ ಅನೇಕ ಕಂಪನಿಗಳಿವೆ. ಬೇಕಾದಷ್ಟು ವ್ಯವಹಾರ ನಡೆಯುತ್ತಿವೆ. ಏನೇ ಆಸ್ತಿ ಖರೀದಿಸಿದರೂ, ಹಣ ಖರ್ಚು ಮಾಡಿದರೂ ಪ್ರತಿಯೊಂದಕ್ಕೂ ಲೆಕ್ಕ ಇಟ್ಟಿದ್ದೇನೆ. ಕಾಲಕಾಲಕ್ಕೆ ಚುನಾವಣಾ ಆಯೋಗ ಮತ್ತು ಲೋಕಾಯುಕ್ತಕ್ಕೆ ಪ್ರಮಾಣ ಪತ್ರ ಸಲ್ಲಿಸುತ್ತಿದ್ದೇನೆ’ ಎಂದು ಜಾರ್ಜ್‌ ದೂರಿಗೆ ಪ್ರತಿಕ್ರಿಯಿಸಿದ್ದಾರೆ.

ಯಾರೇ ದೂರು ಕೊಟ್ಟರೂ ಭಯವಿಲ್ಲ. ಇ.ಡಿ ಕೇಳಿದರೆ ಉತ್ತರ ಕೊಡಲು ಸಿದ್ಧ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.