ADVERTISEMENT

ಕ್ಯಾಮೆರಾ ಬಾಡಿಗೆಗೆ ಪಡೆದು ಒಎಲ್‌ಎಕ್ಸ್‌ನಲ್ಲಿ ಮಾರಾಟ: ವಂಚಕ ಸೆರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 3:43 IST
Last Updated 2 ಮಾರ್ಚ್ 2019, 3:43 IST
ಅಶ್ವಕ್
ಅಶ್ವಕ್   

ಬೆಂಗಳೂರು: ದುಬಾರಿ ಬೆಲೆಯ ಕ್ಯಾಮೆರಾ ಹಾಗೂ ಲೆನ್ಸ್‌ಗಳನ್ನು ಬಾಡಿಗೆ ಪಡೆದು ಅವುಗಳನ್ನು ‘ಒಎಲ್‌ಎಕ್ಸ್‌’ನಲ್ಲಿ ಮಾರಾಟ ಮಾಡುತ್ತಿದ್ದ ಚಾಲಾಕಿ ವಂಚಕ ಅಶ್ವಕ್ ಖಾನ್ (25) ಹೈಗ್ರೌಂಡ್ಸ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ವಿಜಯನಗರ ಪೈಪ್‌ಲೈನ್ ನಿವಾಸಿಯಾದ ಅಶ್ವಕ್‌ ವಿರುದ್ಧ ವಸಂತನಗರದದ ‘ವಿನೀತ್ ವಿಡಿಯೋಸ್’ ಸ್ಟುಡಿಯೊ ಮಾಲೀಕ ಮನೋಹರ್ ಇದೇ 20ರಂದು ಹೈಗ್ರೌಂಡ್ಸ್ ಠಾಣೆಗೆ ದೂರು ಕೊಟ್ಟಿದ್ದರು. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಆರೋಪಿಯನ್ನು ವಿಜಯನಗರದಲ್ಲೇ ಸೆರೆ ಹಿಡಿದಿರುವ ಪೊಲೀಸರು, ₹ 33 ಲಕ್ಷ ಮೌಲ್ಯದ 9 ಕ್ಯಾಮೆರಾಗಳು ಹಾಗೂ 14 ಲೆನ್ಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಪಿಯುಸಿ ಓದಿರುವ ಅಶ್ವಕ್, ಮೊದಲು ಸ್ವಂತ ಸ್ಟುಡಿಯೊ ಹೊಂದಿದ್ದ. ವ್ಯವಹಾರದಲ್ಲಿ ನಷ್ಟ ಉಂಟಾಗಿದ್ದರಿಂದ ಸ್ಟುಡಿಯೊ ಮುಚ್ಚಿ ವಂಚನೆ ಕೃತ್ಯಕ್ಕೆ ಇಳಿದಿದ್ದ. ಪರಿಚಿತರ ಸ್ಟುಡಿಯೊ ಮಾಲೀಕರನ್ನು ಭೇಟಿಯಾಗುತ್ತಿದ್ದ ಈತ, ‘ನನಗೆ 4 ದಿನಕ್ಕೆ ಕ್ಯಾಮೆರಾ ಹಾಗೂ ಲೆನ್ಸ್‌ಗಳು ಬಾಡಿಗೆ ಬೇಕು’ ಎಂದು ಮುಂಗಡ ಹಣ ಕೊಟ್ಟು ತೆಗೆದುಕೊಂಡು ಹೋಗುತ್ತಿದ್ದ.

ADVERTISEMENT

ಆ ನಂತರ ಅವುಗಳನ್ನು ‘ಒಎಲ್‌ಎಕ್ಸ್‌’ನಲ್ಲಿ ಅರ್ಧ ಬೆಲೆಗೆ ಮಾರಾಟ ಮಾಡಿ, ಸ್ನೇಹಿತರೊಟ್ಟಿಗೆ ಗೋವಾ ಹಾಗೂ ಮುಂಬೈಗೆ ತೆರಳಿ ಮೋಜಿನ ಜೀವನ ನಡೆಸುತ್ತಿದ್ದ. ಈತನ ವಿರುದ್ಧ ವಿಜಯನಗರ, ಜಯನಗರ, ಹೈಗ್ರೌಂಡ್ಸ್, ಅಶೋಕನಗರ, ಚನ್ನಮ್ಮನಕೆರೆ ಅಚ್ಚುಕಟ್ಟು ಹಾಗೂ ಬನಶಂಕರಿ ಠಾಣೆಗಳಲ್ಲಿ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಮಾಹಿತಿ ನೀಡಿದರು.

ಖಾಲಿದ್ ಅಹಮದ್‌ಗೆ ಶೋಧ: ‘2018ರ ಡಿ.26ರಂದು ಸ್ಟುಡಿಯೊಗೆ ಬಂದಿದ್ದ ಅಶ್ವಕ್, ‘₹ 8.5 ಲಕ್ಷ ಮೌಲ್ಯದ ಕ್ಯಾಮೆರಾ ಹಾಗೂ ಲೆನ್ಸ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಹೋಗಿದ್ದ. ಮರುದಿನ ಬೆಳಿಗ್ಗೆ ತನ್ನ ಸೋದರ ಸಂಬಂಧಿ ಖಾಲಿದ್ ಅಹಮದ್‌ನನ್ನೂ ಕಳುಹಿಸಿ ಮತ್ತೊಂದು ಕ್ಯಾಮೆರಾ ಪಡೆದುಕೊಂಡಿದ್ದ. ಈ ವೇಳೆ ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ಕೊಟ್ಟಿದ್ದರು’ ಎಂದು ವಂಚನೆಗೆ ಒಳಗಾದ ಮನೋಹರ್ ತಿಳಿಸಿದ್ದಾರೆ.

‘ವಾರ ಕಳೆದರೂ ಅವರು ವಾಪಸಾಗಲಿಲ್ಲ. ಮೊಬೈಲ್ ಕೂಡ ಸ್ವಿಚ್ಡ್‌ ಆಫ್ ಮಾಡಿಕೊಂಡಿದ್ದರು. ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸ ಹುಡುಕಿಕೊಂಡು ಮನೆಗೆ ಹೋದೆವು. ‘ಮಗ ಮನೆ ಬಿಟ್ಟು ತುಂಬ ವರ್ಷಗಳೇ ಆದವು’ ಎಂದು ಅಶ್ವಕ್‌ ಪೋಷಕರು ಹೇಳಿದರು. ಪರಿಚಿತ ಸ್ಟುಡಿಯೊ ಮಾಲೀಕರನ್ನು ವಿಚಾರಿಸಿದಾಗ ಅಶ್ವಕ್ ತಮಗೂ ವಂಚಿಸಿರುವುದಾಗಿ ಹೇಳಿದರು. ಹೀಗಾಗಿ, ಠಾಣೆಯ ಮೆಟ್ಟಿಲೇರಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.