ADVERTISEMENT

ರೂ 10 ಲಕ್ಷ ಪರಿಹಾರ ನೀಡುವ ಆದೇಶ ರದ್ದು

ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದ ಗುತ್ತಿಗೆ ನೌಕರ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 20:10 IST
Last Updated 2 ಜನವರಿ 2019, 20:10 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಗುತ್ತಿಗೆ ನೌಕರರೊಬ್ಬರು ಮ್ಯಾನ್‌ಹೋಲ್‌ಗೆ ಬಿದ್ದು ಸಾವನ್ನಪ್ಪಿದ ಪ್ರಕರಣದಲ್ಲಿ ₹10 ಲಕ್ಷ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವಂತೆ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠ ರದ್ದುಗೊಳಿಸಿದೆ.

ಈ ಕುರಿತಂತೆ ಬಿಬಿಎಂಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಲ್. ನಾರಾಯಣ ಸ್ವಾಮಿ ಮತ್ತು ಅಶೋಕ್ ಜಿ.ನಿಜಗಣ್ಣವರ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ಮಾನ್ಯ ಮಾಡಿದೆ.

ಬಿಬಿಎಂಪಿ ಪರ ವಾದ ಮಂಡಿಸಿದ ವಕೀಲ ಕೆ.ಎನ್.ಪುಟ್ಟೇಗೌಡ ಅವರು, ‘ಮೃತ ವ್ಯಕ್ತಿಗೆ ಮ್ಯಾನ್‌ಹೋಲ್ ಶುಚಿಗೊಳಿಸುವ ಕೆಲಸ ವಹಿಸಿರಲಿಲ್ಲ. ಅವರು ಸಾವಿಗೆ ಅಜಾಗರೂಕತೆಯೇ ಕಾರಣ. ಆದರೂ, ಮಾನವೀಯ ನೆಲೆಯಲ್ಲಿ ಪಾಲಿಕೆ ಅವರಿಗೆ ಈಗಾಗಲೇ ಮೇಯರ್‌ ನಿಧಿಯಿಂದ ₹2 ಲಕ್ಷ ಪರಿಹಾರ ನೀಡಿದೆ’ ಎಂದು ಹೇಳಿದರು.

ADVERTISEMENT

ಈ ಪರಿಹಾರ ಹೆಚ್ಚಿಸುವಂತೆ ಕೋರಿ ಮೃತರ ಪತ್ನಿ ಮತ್ತು ಮಕ್ಕಳು ಹೈಕೋರ್ಟ್‌ ಮೊರೆ ಹೊಕ್ಕ ಕಾರಣ ಏಕಸದಸ್ಯ ನ್ಯಾಯಪೀಠ ಸಫಾಯಿ ಕರ್ಮಚಾರಿ ಕಾಯಿದೆ ಅನ್ವಯ ಹಾಗೂ ಸುಪ್ರೀಂಕೋರ್ಟ್‌ ನಿರ್ದೇಶನದಂತೆ
₹10 ಲಕ್ಷ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಆದೇಶಿಸಿದೆ. ಆದರೆ, ಈ ಆದೇಶ ಸಮಂಜಸವಾಗಿಲ್ಲ’ ಎಂದು ಆಕ್ಷೇಪಿಸಿದರು.

‘ವಾಸ್ತವದಲ್ಲಿ ಮೃತರು ಪಾಲಿಕೆಯ ಕಾಯಂ ಸಿಬ್ಬಂದಿಯೇ ಅಲ್ಲ. ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ 75 ವರ್ಷವಾಗಿತ್ತು. ಸಾವಿಗೆ ಅವರ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಈ ಪ್ರಕರಣ ಸಫಾಯಿ ಕರ್ಮಚಾರಿ ಕಾಯಿದೆ ವ್ಯಾಪ್ತಿಗೆ ಬರುವುದಿಲ್ಲ. ಆದ್ದರಿಂದ ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ವಿಭಾಗೀಯ ನ್ಯಾಯಪೀಠ, ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದು
ಗೊಳಿಸಿತು.

ಪ್ರಕರಣವೇನು?: 2014ರ ಜನವರಿ 18ರಂದು ಕೆ.ಪಿ.ಅಗ್ರಹಾರದಲ್ಲಿ ಚೆನ್ನಯ್ಯ ಎಂಬ ಗುತ್ತಿಗೆ ನೌಕರ ಮ್ಯಾನ್‌
ಹೋಲ್ ಶುಚಿಗೊಳಿಸುತ್ತಿದ್ದ ವೇಳೆ ಸಾವನ್ನಪ್ಪಿದ್ದರು. ಅವರ ಪತ್ನಿ ಚಿನ್ನಮ್ಮ, ಮಕ್ಕಳಾದ ಸುನೀತಾ ಹಾಗೂ ಭೂಷಣ್‌ ಹೆಚ್ಚಿನ ಪರಿಹಾರ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.