ADVERTISEMENT

ಈ ಗೌಡರದು ಟೋಪಿ ಹಾಕುವ ಕಾಯಕ!

ಪುಟ್‌ಪಾತ್ ಜೀವನ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 19:44 IST
Last Updated 24 ಜುಲೈ 2019, 19:44 IST
ಕಲರ್ ಕಲರ್ ಟೋಪಿಗಳು
ಕಲರ್ ಕಲರ್ ಟೋಪಿಗಳು   

ಟೋಪಿಗಳು ಎಂದಾಕ್ಷಣ ಗಾಂಧಿ ಟೋಪಿ ನೆನಪಾಗುವುದು ಸಹಜ. ಮೋಸಕ್ಕೆ ‘ಟೋಪಿ’ ಹಾಕುವುದು ಎನ್ನುವ ಅನ್ವರ್ಥವೂ ಚಾಲ್ತಿಯಲ್ಲಿದೆ. ಇದು ಕೂಡ ಟೋಪಿ ಹಾಕುವ ವಿಷಯವೇ. ಅದೂ ಕಲರ್‌ ಕಲರ್‌.. ಬೇಸಿಗೆ, ಮಳೆಗಾಲ, ಚಳಿಗಾಲಕ್ಕೆ ಬಗೆ ಬಗೆಯ ವಿಭಿನ್ನ ವಿನ್ಯಾಸದ ಟೋಪಿಗಳ ಮಾತಿದು. ಇದೀಗ ಮಾರುಕಟ್ಟೆಯಲ್ಲಿ ಈ ಟೋಪಿಗಳದ್ದೇ ಭರಾಟೆ.

ಕಸೂತಿಯಿಂದ ರೂಪುಗೊಂಡ ಟೋಪಿಗಳಿಗೆ ಹೆಚ್ಚು ಜನ ಮನಸೋಲುತ್ತಿದ್ದಾರೆ. ಆಯಾ ಋತುಮಾನಕ್ಕೆ ತಕ್ಕಂಥ ಟೋಪಿಗಳು ಈಗ ಮಾರುಕಟ್ಟೆಯ ರಂಗು ಹೆಚ್ಚಿಸುತ್ತಿವೆ. ಗ್ರಾಹಕರನ್ನೂ ಸೆಳೆಯುತ್ತಿವೆ.ಫುಟ್‌ಪಾತ್‌ಗಳ ಮೇಲೆ ಅಲ್ಲಲ್ಲಿ ಇದರ ವ್ಯಾಪಾರ.

ಕೆಲವರಿಗೆ ಪುಟ್‌ಪಾತ್‌ಗಳೇ ಜೀವನಾಧಾರ. ಪುಸ್ತಕ, ಕಡಲೆಕಾಯಿ, ಕನ್ನಡಕ, ವಾಚ್‌, ಮಹಿಳೆಯರು ಧರಿಸುವ ಓಲೆಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವವರಿದ್ದಾರೆ. ಇವರಲ್ಲಿ ವಿಭಿನ್ನವಾದ ಟೋಪಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಸ್ವಾಮಿ ಗೌಡ ಕೂಡ ಒಬ್ಬರು. ನಗರದ ಎಂಜಿ ರಸ್ತೆಯ ಆಸು–ಪಾಸು ಸಣ್ಣ ಗಾಡಿಯಲ್ಲಿ ಟೋಪಿಗಳನ್ನಿಟ್ಟುಕೊಂಡು ಮಾರಾಟ ಮಾಡುವ ಗೌಡರು ಬದುಕಿಗೊಂದು ನೆಲೆ ಕಂಡುಕೊಂಡಿದ್ದಾರೆ.

ADVERTISEMENT

ಮೂಲತಃ ಮಂಡ್ಯದ ಈ ಗೌಡರು ಬೆಂಗಳೂರಿನಲ್ಲಿ ಎಲ್ಲರಿಗೂ ‘ಟೋಪಿ’ ಹಾಕುತ್ತಿದ್ದಾರೆ. ಅಂದರೆ ಟೋಪಿ ಮಾರಾಟ ವೃತ್ತಿಯಲ್ಲಿದ್ದಾರೆ. ಈ ಕಾಯಕಕ್ಕೆ ಆಗಲೇ ವರ್ಷಗಳೇ ಆಗಿವೆ. ಏನ್‌ ಗೌಡ್ರೆ, ಟೋಪಿ ಹಾಕುವ ಕೆಲಸ ಜೋರು ಇರುವ ಹಾಗಿದೆ? ಎಂದು ಕೆಣಕಿದರೆ ನಸುನಕ್ಕ ಗೌಡರು ‘ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಟೋಪಿ ಹಾಕ್ತೀನಿ. ಒಂದು ದಿನಕ್ಕೆ ₹3 ಸಾವಿರ ವ್ಯಾಪಾರವಾದರೆ ₹800 ಆದಾಯ ಬರುತ್ತದೆ. ಮಳೆಗಾಲ ಮತ್ತು ಚಳಿಗಾಲದಲ್ಲಿ ವ್ಯಾಪಾರ ಸ್ವಲ್ಪ ಜಾಸ್ತಿ. ಇದೇ ನಮ್ಮ ಹೊಟ್ಟೆಪಾಡು’ ಎಂದವರೇ ಗಿರಾಕಿಯೊಬ್ಬರ ತಲೆಗೆ ಟೋಪಿ ಇಟ್ಟರು. ‘ಅವರ ತಲೆಗೆ ಟೋಪಿ ಹಾಕಿದ್ರೆನೇ ನಮ್ಮ ಹೊಟ್ಟೆಗೆ ಅನ್ನ’ ಎನ್ನುತ್ತ ಸ್ವಾಮಿ ಗೌಡರು ಮತ್ತದೇ ದೇಶಾವರಿ ನಗೆ ಬೀರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.