ಬೆಂಗಳೂರು: ನಾಗರಬಾವಿಯ ಅಂಬೇಡ್ಕರ್ ಕಾಲೇಜು ಬಳಿ ಶುಕ್ರವಾರ ರಾತ್ರಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯಲ್ಲಿ ನಿಂತಿದ್ದ ಪಾದಚಾರಿಗಳು ಹಾಗೂ ನಿಲುಗಡೆ ಮಾಡಿದ್ದ ಹಲವು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರು ಪಾದಚಾರಿಗಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಾಗರಬಾವಿಯ ಕ್ವಾರ್ಟ್ರಸ್ ಗೇಟ್ ಕಡೆಯಿಂದ ದೀಪಾ ಕಾಂಪ್ಲೆಕ್ಸ್ ಕಡೆಗೆ ಹೊರಟಿದ್ದ ಕಾರು ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಪಾದಚಾರಿಗಳು ಹಾಗೂ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರು ಚಾಲಕನನ್ನು ಜ್ಞಾನಭಾರತಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಾಲಕನ ಥಳಿಸಲು ಯತ್ನ: ಘಟನೆಯಿಂದ ಸಿಟ್ಟಿಗೆದ್ದ ಸ್ಥಳೀಯರು ಚಾಲಕನನ್ನು ಕಾರಿನಿಂದ ಕೆಳಕ್ಕೆ ಇಳಿಸಿ ಹಲ್ಲೆ ನಡೆಸಲು ಮುಂದಾದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಚಾಲಕನನ್ನು ವಶಕ್ಕೆ ಪಡೆದುಕೊಂಡರು.
ಅಪಘಾತದಿಂದ ಅಂಬೇಡ್ಕರ್ ಕಾಲೇಜು ಬಳಿ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಬಂದ ಜಖಂಗೊಂಡ ದ್ವಿಚಕ್ರ ವಾಹನ ಹಾಗೂ ಕಾರನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.