ADVERTISEMENT

‘ಕಾವೇರಿ’ಗೆ ಹಗ್ಗ–ಜಗ್ಗಾಟ ನಡೆದಿಲ್ಲ

ಸರ್ಕಾರಿ ನಿವಾಸ ಹಂಚಿಕೆ ವಿವಾದ: ಹಿರಿಯ ಅಧಿಕಾರಿಯೊಬ್ಬರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 2:40 IST
Last Updated 21 ಅಕ್ಟೋಬರ್ 2019, 2:40 IST

ಬೆಂಗಳೂರು: ‘ಕಾವೇರಿ’ ನಿವಾಸಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮತ್ತು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯೆ ಹಗ್ಗ–ಜಗ್ಗಾಟ ನಡೆದಿಲ್ಲ ಎಂದು ಎರಡೂ ಕಡೆಯ ಮೂಲಗಳು ಸ್ಪಷ್ಟಪಡಿಸಿವೆ.

ಅಧಿಕೃತ ನಿವಾಸ ‘ಕೃಷ್ಣಾ’ ಪಕ್ಕದಲ್ಲೇ ‘ಕಾವೇರಿ’ ಇರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಅದಕ್ಕೆ ಕೋರಿಕೆ ಸಲ್ಲಿಸಿದ್ದರು. ಆದ್ದರಿಂದ, ಅವರಿಗೆ ಆ ನಿವಾಸವನ್ನು ಹಂಚಿಕೆ ಮಾಡಲಾಗಿದೆ ಎಂದು ಆಡಳಿತ ಮತ್ತು ಸಿಬ್ಬಂದಿ ಇಲಾಖೆ (ಶಿಷ್ಟಾಚಾರ) ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಲ್ಲದೆ, ಅದನ್ನು ತಕ್ಷಣವೇ ಖಾಲಿ ಮಾಡುವಂತೆ ನೋಟಿಸ್‌ ನೀಡಿಲ್ಲ. ವಿದ್ಯುತ್‌ ಅಥವಾ ನೀರು ಸಂಪರ್ಕ ಕಡಿತ ಮಾಡುತ್ತೇವೆ ಎಂದೂ ಹೇಳಿಲ್ಲ. ಈ ಹಿಂದೆ ಕೆ.ಜೆ.ಜಾರ್ಜ್‌ ಅವರಿಗೆ ‘ಕಾವೇರಿ’ ಹಂಚಿಕೆ ಮಾಡಲಾಗಿತ್ತು. ಅವರು ಅದನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಟ್ಟಿದ್ದರು. ಈಗ ಮನೆ ಬಿಟ್ಟುಕೊಡುವಂತೆ ಜಾರ್ಜ್‌ ಅವರಿಗೆ ಮೌಖಿಕವಾಗಿ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಂತಹ ಪ್ರಮುಖರಿಗೆ ನೋಟಿಸ್‌ ನೀಡಿ, ತಕ್ಷಣವೇ ಬಿಟ್ಟುಕೊಡಿ ಎಂದು ತಾಕೀತು ಮಾಡುವ ಪ್ರಶ್ನೆಯೇ ಇಲ್ಲ. ಸದ್ಯ, ಸಿದ್ದರಾಮಯ್ಯ ಅವರಿಗೆ ರೇಸ್‌ ವ್ಯೂ –2 ನಿವಾಸ ಹಂಚಿಕೆ ಆಗಿದೆ’ ಎಂದರು.

ತೆರವಿಗೆ ಸಿದ್ಧ: ಸಿದ್ದರಾಮಯ್ಯ ಅವರು ‘ಕಾವೇರಿ’ ನಿವಾಸ ತೆರವಿಗೆ ಸಿದ್ಧರಿದ್ದು, ಪರ್ಯಾಯ ವ್ಯವಸ್ಥೆವರೆಗೂ ಅಲ್ಲೇ ಇರುತ್ತಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

‘ಕಾವೇರಿ’ ಮನೆ ಬಳಿ ಸಿದ್ದರಾಮಯ್ಯ ಅವರ ಹೆಸರಿನ ಫಲಕವಷ್ಟೇ ಇತ್ತು. ವಿರೋಧ ಪಕ್ಷದ ನಾಯಕರಾದ ಮೇಲೆ ಹೊಸ ಫಲಕ ಅಳವಡಿಸಲು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಹಳೆಯದನ್ನು ತೆಗೆದಿದ್ದು, ಹೊಸದು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.