ADVERTISEMENT

ನಿವೇಶನಗಳ ಮಾರಾಟ ವಂಚನೆ: ಉದ್ಯಮಿ ಬಂಧನ

ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಸೇಲ್‌ ಡೀಡ್‌ ಮೂಲಕ ಪರಭಾರೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 21:43 IST
Last Updated 6 ನವೆಂಬರ್ 2019, 21:43 IST

ಬೆಂಗಳೂರು: ಸೇಲ್ ಅಗ್ರಿಮೆಂಟ್ ಮೇಲೆ ನಿವೇಶನಗಳನ್ನು ಅಕ್ರಮವಾಗಿ ನೋಂದಾಯಿಸಿ ಸರ್ಕಾರಕ್ಕೆ ಭಾರಿ ನಷ್ಟ ಉಂಟು ಮಾಡಿದ ಪ್ರಕರಣದಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರನ್ನು ಕೇಂದ್ರ ಅಪರಾಧ ದಳದ (ಸಿಸಿಬಿ) ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.

ವಿವಿಧೆಡೆ ಕಂದಾಯ ಮತ್ತಿತರ ಭೂಮಿಯನ್ನು ನಿಯಮಬಾಹಿರವಾಗಿ ಸೇಲ್‌ ಡೀಡ್‌ ಮಾಡಿದ ಪ್ರಕರಣದಲ್ಲಿ ಕೆಲವು ಸಬ್‌ ರಿಜಿಸ್ಟ್ರಾರ್‌ ಸೇರಿದಂತೆ 20ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಎನ್ನಲಾದ ಈ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ. ಸಬ್‌ ರಿಜಿಸ್ಟ್ರಾರ್‌ಗಳಾದ ವಿ. ಪ್ರಸನ್ನ, ಎಸ್‌. ಭಾಸ್ಕರ್‌ ಮತ್ತಿತರರು ಸಿಸಿಎಚ್‌ ನ್ಯಾಯಾಲಯದಲ್ಲಿ ಮಂಗಳವಾರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಬಂಧಿತ ಸೋಮಣ್ಣ ದಾಸನಪುರದ ರೈತರಿಂದ 5 ಎಕರೆ ಖರೀದಿಸಿ, ಭೂ ಪರಿವರ್ತನೆ ಮಾಡದೆ ನಿವೇಶನಗಳಾಗಿ ಪರಿವರ್ತಿಸಿ ಸೇಲ್‌ ಅಗ್ರಿಮೆಂಟ್‌ ಮಾಡಿ ಬಳಿಕ ಸೇಲ್‌ ಡೀಡ್‌ ಮೂಲಕ ಮಾರಿದ್ದಾರೆ. ಒಂದೇ ದಿನ ಸುಮಾರು 40 ನಿವೇಶನಗಳನ್ನು ಲಗ್ಗೆರೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನೋಂದಣಿ ಮಾಡಲಾಗಿದೆ. ದಾಸನಪುರದಲ್ಲೇ ಸಬ್‌ ರಿಜಿಸ್ಟ್ರಾರ್‌ ಕಚೇರಿ ಇದ್ದರೂ ಲಗ್ಗೆರೆಯಲ್ಲಿ ನಿವೇಶನಗಳನ್ನು ನೋಂದಣಿ ಮಾಡಿದ್ದು ಏಕೆ ಎಂಬ ಪ್ರಶ್ನೆ ಕುತೂಹಲಕ್ಕೆ ಕಾರಣವಾಗಿದೆ.

ADVERTISEMENT

ಆರೋಪಿ ಸೋಮಣ್ಣ ಈ ಪ್ರದೇಶಕ್ಕೆ ಎವರ್‌ಗ್ರೀನ್‌ ಎನ್‌ಕ್ಲೇವ್‌ ಎಂದು ಹೆಸರಿಟ್ಟು 20/30, 30/40 ನಿವೇಶನಗಳನ್ನು ಮಾಡಿ ಮಾರುತ್ತಿದ್ದರು. ಒಂದನೇ ಹಂತದ ಬಡಾವಣೆ ಪೂರ್ಣಗೊಂಡಿದ್ದು, ಎರಡನೇ ಹಂತಕ್ಕೆ ಕೈಹಾಕಿದ್ದರು. ಈ ನಿವೇಶನಗಳನ್ನು ₹ 30 ಮತ್ತು ₹ 40 ಲಕ್ಷಕ್ಕೆ ಮಾರುತ್ತಿದ್ದರು. ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ನಿವೇಶನಗಳು ನೋಂದಣಿ ಆಗುತ್ತಿದ್ದರಿಂದ ಜನ ನಂಬಿ ಖರೀದಿಸಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಪ್ರತಿ ಎಕರೆ ಜಮೀನನ್ನು ₹ 70 ಲಕ್ಷಕ್ಕೆ ರೈತರಿಂದ ಖರೀದಿಸಲಾಗಿದೆ. ಆದರೆ, ಇನ್ನೂ ಪೂರ್ಣವಾಗಿ ಹಣ ಪಾವತಿಸಿಲ್ಲ. ಐದು ಎಕರೆ ಜಮೀನು 80 ವರ್ಷದ ಕೃಷಿಕ ಹಾಗೂ ಅವರ ಮಕ್ಕಳಿಗೆ ಸೇರಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಸಿಸಿಬಿ ಜಂಟಿ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲರ ಮಾರ್ಗದರ್ಶನದಲ್ಲಿ ಸಿಸಿಬಿ ಸೈಬರ್‌ ವಿಭಾಗದ ಡಿಸಿಪಿ ರವಿ ಕುಮಾರ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.