ADVERTISEMENT

ಖೋಟಾ ನೋಟು: ವಿದೇಶಿಗ ಬಂಧನ

‘ಡ್ರಗ್ಸ್‌’ ಪತ್ತೆಗೆ ಹೋಗಿದ್ದ ಸಿಸಿಬಿ ತಂಡ l ₹ 33.70 ಲಕ್ಷ ಮೊತ್ತದ ನೋಟು ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 19:47 IST
Last Updated 13 ಜುಲೈ 2019, 19:47 IST
ಡಿಯೊಡೊನೆ
ಡಿಯೊಡೊನೆ   

ಬೆಂಗಳೂರು:‌ ಕಲರ್‌ ಪ್ರಿಂಟರ್‌ನಲ್ಲಿ ಖೋಟಾ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಆರೋಪದಡಿ ಡಿಯೊಡೊನೆ ಕ್ರಿಸ್ಪೊಲ್ (35) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕಾಮರೋನ್‌ ದೇಶದ ಪ್ರಜೆಯಾದ ಕ್ರಿಸ್ಪೊಲ್, ಪ್ರವಾಸ ವೀಸಾದಡಿ2017ರಲ್ಲಿ ಇಲ್ಲಿಗೆ ಬಂದಿದ್ದಾನೆ. ವೀಸಾ ಅವಧಿ ಮುಗಿದರೂ ನವೀಕರಣ ಮಾಡಿಸಿರಲಿಲ್ಲ. ಅಕ್ರಮವಾಗಿ ವಾಸವಿದ್ದುಕೊಂಡು ಖೋಟಾ ನೋಟು ಮುದ್ರಣ ಮಾಡುತ್ತಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಬಾಣಸವಾಡಿ ಸಮೀಪದ ಸುಬ್ಬಯ್ಯಪಾಳ್ಯದ ಸಂಜೀವರೆಡ್ಡಿ ರಸ್ತೆಯ 2ನೇ ಅಡ್ಡರಸ್ತೆಯಲ್ಲಿರುವ ಮನೆಯೊಂದರಲ್ಲಿ ಬಾಡಿಗೆಗೆ ಇದ್ದ ಆರೋಪಿ, ಮಾದಕ ವಸ್ತು ಮಾರಾಟದಲ್ಲೂ ಭಾಗಿಯಾಗಿದ್ದ. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಡ್ರಗ್ಸ್ ಪತ್ತೆಗಾಗಿ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿಗಳು ಆರೋಪಿಯ ಮನೆ ಮೇಲೆ ದಾಳಿ ಮಾಡಿದ್ದರು. ಆದರೆ, ಮನೆಯಲ್ಲಿ ಡ್ರಗ್ಸ್‌ ಬದಲು ಖೋಟಾ ನೋಟುಗಳನ್ನು ಸಿಕ್ಕವು’ ಎಂದು ವಿವರಿಸಿದರು.

ADVERTISEMENT

ವ್ಯವಸ್ಥಿತ ಜಾಲ: ‘ಮನೆಯಲ್ಲೇ ‘ಕೆನಾನ್’ ಕಂಪನಿಯ ಕಲರ್‌ ಪ್ರಿಂಟರ್‌ ಇಟ್ಟುಕೊಂಡಿದ್ದ ಆರೋಪಿ, ₹ 2,000 ಮುಖಬೆಲೆ ನೋಟುಗಳನ್ನು ಮಾತ್ರ ಮುದ್ರಿಸುತ್ತಿದ್ದ. ವ್ಯವಸ್ಥಿತ ಜಾಲದ ಮೂಲಕ ಅವುಗಳನ್ನು ಚಲಾವಣೆ ಮಾಡುತ್ತಿದ್ದ ಎಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ’ ಎಂದು ಅಧಿಕಾರಿ ಹೇಳಿದರು.

‘ದಾಳಿ ವೇಳೆ ₹ 33.70 ಲಕ್ಷ ಮೌಲ್ಯದ ₹ 2,000 ಮುಖಬೆಲೆಯ ಖೋಟಾ ನೋಟುಗಳು, ಕಲರ್ ಪ್ರಿಂಟರ್, 150 ಎ4 ಅಳತೆಯ ಖಾಲಿ ಪೇಪರ್, ಸ್ಟಿಕ್ಕರ್ ಕಟ್ಟರ್, ಮೊಬೈಲ್ ಹಾಗೂ ಆರೋಪಿಯ ಪಾಸ್‍ಪೋರ್ಟ್‌ ಜಪ್ತಿ ಮಾಡಲಾಗಿದೆ’ ಎಂದು ವಿವರಿಸಿದರು.

ಒಂದು ನೋಟು ₹ 500ಕ್ಕೆ ಮಾರಾಟ: ‘ನಗರದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಜೊತೆ ಒಡನಾಟವಿಟ್ಟುಕೊಂಡಿದ್ದ ಆರೋಪಿ, ಅವರ ಮೂಲಕವೇ ಖೋಟಾ ನೋಟುಗಳನ್ನು ಚಲಾವಣೆ ಮಾಡಿಸುತ್ತಿದ್ದ. ಒಂದು ನೋಟಿಗೆ ₹ 400 ರಿಂದ ₹ 500 ಪಡೆಯುತ್ತಿದ್ದ’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ಆರೋಪಿಯು ವಿಚಾರಣೆ ವೇಳೆ ಯಾವುದೇ ಮಾಹಿತಿ ಬಾಯ್ಬಿಡುತ್ತಿಲ್ಲ. ಆತ ಇದುವರೆಗೂ ಎಷ್ಟು ಪ್ರಮಾಣದ ನೋಟುಗಳನ್ನು ಚಲಾವಣೆ ಮಾಡಿಸಿದ್ದಾನೆ ಎಂಬುದೂ ಗೊತ್ತಾಗುತ್ತಿಲ್ಲ. ಆತನ ಕೃತ್ಯದಲ್ಲಿ ಹಲವರು ಶಾಮೀಲಾಗಿರುವ ಮಾಹಿತಿ ಇದ್ದು, ಅದನ್ನು ಪತ್ತೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಸ್ಥಳೀಯರು ಭಾಗಿ ಬಗ್ಗೆ ಅನುಮಾನ

‘ಮಾದಕ ವಸ್ತು ಮಾರಾಟ ಹಾಗೂ ಖೋಟಾ ನೋಟು ದಂಧೆಯಲ್ಲಿ ಭಾಗಿಯಾಗಿರುವ ಆರೋಪಿ ಡಿಯೊಡೊನೆ ಜೊತೆ ಕೆಲ ಸ್ಥಳೀಯರು ಭಾಗಿಯಾಗಿರುವ ಅನುಮಾನವಿದ್ದು, ಅವರು ಯಾರು ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ಸಿಸಿಬಿ ಅಧಿಕಾರಿ ಹೇಳಿದರು.

‘ಆರೋಪಿ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.