ADVERTISEMENT

ಸಂಕಷ್ಟದಲ್ಲಿ ಸಿಸಿಬಿ: ಅಲೋಕ್‌ ಕುಮಾರ್

ಆರೋಪಗಳ ಬಿರುಗಾಳಿಗೆ ನಲುಗಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 20:13 IST
Last Updated 19 ಡಿಸೆಂಬರ್ 2018, 20:13 IST

ಬೆಂಗಳೂರು: ‘ಆ್ಯಂಬಿಡೆಂಟ್ ಪ್ರಕರಣದಲ್ಲಿ ಸಿಸಿಬಿ ವಿರುದ್ಧ ಸುಳ್ಳು ಆರೋಪಗಳ ಬಿರುಗಾಳಿಯೇ ಎದ್ದಿದೆ. ಆ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿ ಒಂದೂವರೆ ವರ್ಷ ಕಳೆದರೂ ಎಲ್ಲರೂ ಸುಮ್ಮನೆ ಕುಳಿತಿದ್ದರು. ಈಗ ಗ್ರಾಹಕರ ಕಾಳಜಿಯಿಂದ ತನಿಖೆಗಿಳಿದ ಸಂಸ್ಥೆ ವಿರುದ್ಧವೇ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಸಿಸಿಬಿ ತುಂಬ ಸಂಕಷ್ಟದ ಸನ್ನಿವೇಶದಲ್ಲಿದೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ ಬೇಸರ ವ್ಯಕ್ತಪಡಿಸಿದರು.

‘ತನಿಖೆ ವಿಚಾರದಲ್ಲಿ ಇದುವರೆಗೂ ಯಾವುದೇ ಲೋಪವಾಗಿಲ್ಲ. ಕೆಲ ದಾಖಲಾತಿಗಳನ್ನು ಹೊರಗಡೆ ಕೊಟ್ಟಿದ್ದರು ಎಂಬ ಕಾರಣಕ್ಕೆ ಎಸಿಪಿ ವೆಂಕಟೇಶ್ ಪ್ರಸನ್ನ ಅವರನ್ನು ವರ್ಗಾವಣೆ ಮಾಡಲಾಗಿತ್ತೇ ಹೊರತು, ತನಿಖೆಯಲ್ಲಿ ಯಡವಟ್ಟು ಮಾಡಿದರು ಎಂದಲ್ಲ. ಎಲ್ಲರೂ ಹಗಲಿರುಳು ಎನ್ನದೇ ಕೆಲಸ ಮಾಡಿದ್ದೇವೆ. ಆದರೀಗ, ಯಾರ‍್ಯಾರೋ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಮಾಜಿ ಸಚಿವ ಜನಾರ್ದನರೆಡ್ಡಿ ಅವರನ್ನು ಬಂಧಿಸಿದಾಗಲೂ ನಮ್ಮ ಮೇಲೆ ಒತ್ತಡವಿತ್ತು. ಗ್ರಾಹಕರ ಹಣ ವಾಪಸ್ ಕೊಡಿಸಬೇಕೆಂಬ ದೃಷ್ಟಿಯಿಂದ ಆರೋಪಿಗಳಿಗೆ ಕಾನೂನು ಪ್ರಕಾರ ನೋಟಿಸ್ ಕೊಟ್ಟು ಕರೆಸಿದ್ದೆವೋ ಹೊರತು, ಅದರಲ್ಲಿ ವೈಯಕ್ತಿಕ ಹಿತಾಸಕ್ತಿ ಇರಲಿಲ್ಲ. ವಂಚನೆಯ ಹಣ ಹಲವರಿಗೆ ಹಂಚಿಕೆಯಾಗಿದೆ. ಯಾರು ಏನೂ ಬೇಕಾದರೂ ಮಾತನಾಡಿಕೊಳ್ಳಲಿ. ಆ ಹಣ ಪೂರ್ತಿಯಾಗಿ ವಾಪಸಾಗುವವರೆಗೂ ಆರೋಪಿಗಳ ಬೆನ್ನು ಹತ್ತದೇ ಬಿಡುವುದಿಲ್ಲ’ ಎಂದರು.

ADVERTISEMENT

2 ಕೋಟಿಗೆ ಡೀಲ್: ‘ಸಿಸಿಬಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದರೆ ₹ 2 ಕೋಟಿ ಕೊಡುವುದಾಗಿ ಜಯೀದ್ ಖಾನ್ ಹಾಗೂ ಸಿರಾಜುದ್ದೀನ್‌ಗೆ ಉದ್ಯಮಿ ವಿಜಯ್ ತಾತಾ ಹೇಳಿದ್ದ. ಮುಂಗಡವಾಗಿ ₹ 20 ಲಕ್ಷದ ಚೆಕ್‌ ಕೂಡ ನೀಡಿದ್ದ. ಅದು ಬೌನ್ಸ್ ಆಗಿದೆ. ಹೀಗೆ, ಎಲ್ಲ ದಾಖಲೆಗಳನ್ನು ಇಟ್ಟುಕೊಂಡೇ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದರು.

‘ಆರೋಪಿಗಳಿಗೆ ಸಿಸಿಬಿಯವರು ಸಹಾಯ ಮಾಡಿದ್ದಾರೆ ಎಂಬುದಕ್ಕೆ ಒಂದೇ ಒಂದು ಸಾಕ್ಷ್ಯ ನೀಡಲಿ. ಮೇಲ್, ಮೆಸೇಜ್, ಆಡಿಯೊ, ಕರೆ ವಿವರ... ಇಂಥ ನಿರ್ದಿಷ್ಟ ದಾಖಲೆಗಳಿದ್ದರೆ ತೋರಿಸಲಿ. ಆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಅದನ್ನು ಬಿಟ್ಟು ಊಹಪೋಹ ಆರೋಪಗಳಿಗೆ ನಾವು ಕಿವಿಗೊಡುವುದಿಲ್ಲ’ ಎಂದರು.

ಪ್ರಕಟಣೆಗೆ ₹ 10 ಲಕ್ಷ!

ಕೇವಲ ಪತ್ರಿಕಾ ಪ್ರಕಟಣೆ ಸಿದ್ಧಪಡಿಸಿ ಕೊಟ್ಟಿದ್ದಕ್ಕೇ ಮಾಜಿ ಪತ್ರಕರ್ತ ಅಶೋಕ್ ಅವರನ್ನು ಬಂಧಿಸಲಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಪಿ ಎಸ್.ಗಿರೀಶ್, ‘ಅಶೋಕ್ ಸದ್ಯ ವಿಜಯ್ ತಾತಾನ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದ. ಪ್ರಕಟಣೆ ಸಿದ್ಧಪಡಿಸುವುದರ ಜತೆಗೆ, ಜಯೀದ್ ಹಾಗೂ ಸಿರಾಜುದ್ದೀನ್‌ಗೆ ಮಾರ್ಗದರ್ಶನ ಕೂಡ ನೀಡಿದ್ದ. ಈ ಕೆಲಸಕ್ಕೆ ಆತನಿಗೆ ತಾತಾ ₹ 10 ಲಕ್ಷ ಕೊಟ್ಟಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.