ADVERTISEMENT

ರಾತ್ರಿಯಷ್ಟೇ ಶಂಕಿತ ಉಗ್ರನ ಓಡಾಟ: ಕಾದು ಹಿಡಿದ ಸಿಸಿಬಿ

ಎನ್‌ಐಎ, ಕೇಂದ್ರ ಗುಪ್ತದಳ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2022, 20:25 IST
Last Updated 25 ಜುಲೈ 2022, 20:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಅಲ್‌ಕೈದಾ’ ಉಗ್ರ ಸಂಘಟನೆ ಸದಸ್ಯನಾಗಿ ಭಯೋತ್ಪಾದನಾ ಕೃತ್ಯ ಎಸಗಲು ಸಿದ್ಧನಾಗಿದ್ದ ಅಖ್ತರ್ ಹುಸೇನ್ ಲಷ್ಕರ್, ಕೇಂದ್ರ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳಿಗೆ ಸುಳಿವು ಸಿಗಬಾರದೆಂದು ರಾತ್ರಿ ಮಾತ್ರ ನಗರದಲ್ಲಿ ಓಡಾಡುತ್ತಿದ್ದ. ಈತನ ಹೆಜ್ಜೆ ಗುರುತು ಪತ್ತೆ ಮಾಡಿದ್ದ ಕೇಂದ್ರ ಗುಪ್ತದಳ ಹಾಗೂ ಬೆಂಗಳೂರು ಸಿಸಿಬಿ ಅಧಿಕಾರಿಗಳು, ವಾರವಿಡೀ ಅಖ್ತರ್‌ನನ್ನು ಹಿಂಬಾಲಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಕೇಂದ್ರ ಹಾಗೂ ರಾಜ್ಯ ಗುಪ್ತದಳ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಅಖ್ತರ್‌ನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಕಸ್ಟಡಿಗೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

‘ತಿಲಕ್‌ನಗರ ಬಿಟಿಪಿ ಪ್ರದೇಶದ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿದ್ದ ಕೊಠಡಿಯಲ್ಲಿ ಅಖ್ತರ್ ಹಾಗೂ ಸ್ನೇಹಿತರು ನೆಲೆಸಿದ್ದರು. ರಾತ್ರಿ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದರು. ಡೆಲಿವರಿ ಬಾಯ್‌ ಆಗಿ ನಗರದಲ್ಲಿ ರಾತ್ರಿಯಿಡೀ ಓಡಾಡಿ, ನಸುಕಿನಲ್ಲಿ ಮನೆಗೆ ವಾಪಸು ಹೋಗುತ್ತಿದ್ದರು. ಹಗಲೆಲ್ಲ ಮನೆಯಲ್ಲೇ ಕಾಲ ಕಳೆಯುತ್ತಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ADVERTISEMENT

‘ಅಖ್ತರ್ ಹಾಗೂ ಸ್ನೇಹಿತರನ್ನು ಸ್ಥಳೀಯರು ಹೆಚ್ಚಾಗಿ ನೋಡಿಲ್ಲ. ಬಾಡಿಗೆಯನ್ನೂ ಅಖ್ತರ್, ಕಟ್ಟಡದ ಮಾಲೀಕನ ಖಾತೆಗೆ ಪ್ರತಿ ತಿಂಗಳು ನಿಗದಿತ ದಿನದಂದು ಪಾವತಿ ಮಾಡುತ್ತಿದ್ದರು. ಹೀಗಾಗಿ, ಮಾಲೀಕರು ಸಹ ಶಂಕಿತನ ಬಗ್ಗೆ ಹೆಚ್ಚು ವಿಚಾರಿಸಿರಲಿಲ್ಲ’ ಎಂದಿವೆ.

‘ಅಖ್ತರ್ ಕೃತ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್‌ಐಎ ಹಾಗೂ ಕೇಂದ್ರ ಗುಪ್ತದಳದ ಅಧಿಕಾರಿಗಳು, ಕರ್ನಾಟಕದ ಪೊಲೀಸರಿಗೆ ಸುಳಿವು ನೀಡಿದ್ದರು. ಅದರಂತೆ ಸಿಸಿಬಿ ಭಯೋತ್ಪಾದನಾ ವಿಭಾಗದ ಅಧಿಕಾರಿಗಳು, ಅಖ್ತರ್ ಬೆನ್ನು ಬಿದ್ದಿದ್ದರು. ಒಂದು ವಾರ ಚಲನವಲನ ಗಮನಿಸಿ, ಭಾನುವಾರ ಸಂಜೆ 6 ಗಂಟೆಗೆ ಬಂಧಿಸಿದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಯುಎಪಿ ಕಾಯ್ದೆಯಡಿ ಎಫ್‌ಐಆರ್: ‘ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಹಲವು ಯುವಕರು ಸಂಘಟಿತರಾಗಿ ಅಲ್‌ಕೈದಾ ಉಗ್ರ ಸಂಘಟನೆ ಸೇರಲು ಹೊರಟಿದ್ದರು. ಅದರ ಜೊತೆಯಲ್ಲೇ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದರು. ಈ ಪೈಕಿ ಅಖ್ತರ್‌ನನ್ನು ಮಾತ್ರ ಸದ್ಯ ಬಂಧಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ (ಯುಎಪಿ) ಅಖ್ತರ್ ಹುಸೇನ್ ಹಾಗೂ ಇತರರ ವಿರುದ್ಧ ತಿಲಕ್‌ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿ ಎಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ. ಇತರೆ ಆರೋಪಿಗಳ ಬಂಧನಕ್ಕೂ ತನಿಖೆ ಮುಂದುವರಿದಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಸಿಕ್ಕಿಬಿದ್ದಿದ್ದ ಎಬಿಟಿ ಉಗ್ರ

‘ಬಾಂಗ್ಲಾದೇಶದ ಬ್ಲಾಗರ್ ಅನಂತ್ ವಿಜಯ್ ದಾಸ್ (32) ಅವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ‘ಅನ್ಸರುಲ್ಹಾ ಬಾಂಗ್ಲಾ ಟೀಮ್ (ಎಬಿಟಿ)’ ಉಗ್ರ ಸಂಘಟನೆ ಸದಸ್ಯ ಫೈಜಲ್ ಅಹ್ಮದ್, ಕೃತ್ಯ ನಡೆಸಿ ಏಳು ವರ್ಷಗಳ ಬಳಿಕ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ. ಈತನೂ ಅಖ್ತರ್ ಹುಸೇನ್ ಲಷ್ಕರ್ ಜೊತೆ ಒಡನಾಟ ಹೊಂದಿದ್ದ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬಾಂಗ್ಲಾ ನಿವಾಸಿ ಫೈಜಲ್, ವೈದ್ಯಕೀಯ ವಿದ್ಯಾರ್ಥಿ. 2015ರ ಮೇ 12ರಂದು ಅನಂತ್ ವಿಜಯ್‌ ದಾಸ್‌ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಸಾಹೀದ್ ಮಜುಂದಾರ್ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ನೆಲೆಸಿ, ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನಿಗೂ ಅಲ್‌ಕೈದಾ ಉಗ್ರ ಸಂಘಟನೆ ನಂಟಿತ್ತು’ ಎಂದೂ ಅವರು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.