ಬೆಂಗಳೂರು: ಸಕ್ರಿಯವಾಗಿ ಕಾರ್ಯನಿರ್ವಹಿಸುವ ವಾರ್ಡ್ ಸಮಿತಿಗಳಿಗೆ ಉತ್ತೇಜನ ನಿಡುವ ಸಲುವಾಗಿ ‘ಸಿಟಿಜನ್ಸ್ ಫಾರ್ ಬೆಂಗಳೂರು’ ಸಂಸ್ಥೆಯು ‘ಕಾಪೋರೇಟರ್ ನಂ 1– ನಮ್ಮ ಸಮಿತಿ ಪುರಸ್ಕಾರ’ವನ್ನು ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಈ ಕುರಿತು ಮಾಹಿತಿ ನೀಡಿದ ಸಿಎಫ್‌ಬಿಯ ಸಹಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ, ‘ವಾರ್ಡ್ ಸಮಿತಿ ಸಭೆಗಳನ್ನು ಚಾಚೂತಪ್ಪದೇ ನಡೆಸಿ, ನಾಗರಿಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸುವ ಪಾಲಿಕೆ ಸದಸ್ಯರನ್ನು ನಾಗರಿಕರು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡಬಹುದು. ಅರ್ಹ ಪಾಲಿಕೆ ಸದಸ್ಯರ ಆಯ್ಕೆಗೆ ಆನ್‌ಲೈನ್ ಮೂಲಕ (citizensforbengaluru.in) ಬೆಂಬಲ ವ್ಯಕ್ತಪಡಿಸಬಹುದು’ ಎಂದು ಹೇಳಿದರು.
‘ಸಿಎಫ್‌ಬಿ ಸಲ್ಲಿಸಿದ ಮನವಿಯನ್ನು ಪರಿಗಣಿಸಿ, ಎಲ್ಲಾ ವಾರ್ಡ್ ಸಮಿತಿಗಳು ಪ್ರತಿ ತಿಂಗಳ ಮೊದಲ ಶನಿವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಡೆಸಬೇಕು ಎಂಬ ನಿರ್ಣಯವನ್ನು ಬಿಬಿಎಂಪಿ ಕೌನ್ಸಿಲ್ ಕೈಗೊಂಡಿತು. 2018ರ ಅಕ್ಟೋಬರ್‌ನಲ್ಲಿ ಆಯುಕ್ತರು ಈ ಕುರಿತು ಆದೇಶ ಹೊರಡಿಸಿದರು. 2018ರ ಡಿಸೆಂಬರ್ ಬಳಿಕ ನಗರದಲ್ಲಿ ಸುಮಾರು 500 ವಾರ್ಡ್ ಸಭೆಗಳು ನಡೆದಿವೆ. ಸಭೆಗಳನ್ನು ಚೆನ್ನಾಗಿ ನಿರ್ವಹಿಸಿದ ಪಾಲಿಕೆ ಸದಸ್ಯರನ್ನು ಜನರೇ ಪ್ರಶಸ್ತಿಗೆ ಆಯ್ಕೆ ಮಾಡಲಿದ್ದಾರೆ. ನಮ್ಮ ಸಂಸ್ಥೆಯ ಸ್ವಯಂಸೇವಕರು ತಮ್ಮ ಸುತ್ತಮುತ್ತಲಿನ ವಾರ್ಡ್‌ಗಳಲ್ಲಿ ಸಮೀಕ್ಷೆ ನಡೆಸಿ ಸಮಿತಿ ಚಟುವಟಿಕೆಗಳ ಮೌಲ್ಯಮಾಪನ ಮಾಹಿತಿ ಸಂಗ್ರಹಿಸಲಿದ್ದಾರೆ’ ಎಂದು ತಿಳಿಸಿದರು.
‘ಸಕ್ರಿಯವಾಗಿ ಕಾರ್ಯನಿರ್ವಹಿಸಿರುವ ಎಲ್ಲ ವಾರ್ಡ್ ಸಮಿತಿಗಳಿಗೂ ‘ಕಾಪೋರೇಟರ್ ನಂ 1– ನಮ್ಮ ಸಮಿತಿ ಪುರಸ್ಕಾರ’ ನೀಡಲಿದ್ದೇವೆ. ಇದು ಒಂದು ವಾರ್ಡ್‌ಗೆ ಸೀಮಿತವಲ್ಲ’ ಎಂದರು.
ಸಿಎಫ್‌ಬಿಯ ತಾರಾ ಕೃಷ್ಣಮೂರ್ತಿ, ‘ಸಮಸ್ಯೆಗಳ ಬಗ್ಗೆ ಜನ ದೂರು ಹೇಳುವುದು ಸಹಜ. ವಾರ್ಡ್ ಸಮಿತಿ ಚಟುವಟಿಕೆಗಳಲ್ಲಿ ನಾಗರಿಕರು ಸಕ್ರಿಯ ಭಾಗವಹಿಸಿದ್ದೇ ಆದರೆ, ನಗರದ ಚಿತ್ರಣವನ್ನೇ ಬದಲಾಯಿಸಬಹುದು. ಅನೇಕ ವಾರ್ಡ್‌ಗಳಲ್ಲಿ ಈ ಬೆಳವಣಿಗೆಯನ್ನು ಈಗಾಗಲೇ ಗಮನಿಸಿದ್ದೇವೆ. ಇಂತಹ ಚಟುವಟಿಕೆಯನ್ನು ಗುರುತಿಸಲೆಂದೇ ಈ ಪ್ರಶಸ್ತಿ ಪ್ರಾರಂಭಿದ್ದೇವೆ’ ಎಂದು ವಿವರಿಸಿದರು.
ಕುಮಾರ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಚಿತ್ರಾ ವೆಂಕಟೇಶ್, ‘ಆಡಳಿತವನ್ನು ಪಾರದರ್ಶಕವನ್ನಾಗಿಸಲು ಇರುವ ಸಾಧನವೇ ವಾರ್ಡ್ ಸಮಿತಿ. ಪ್ರಜಾಪ್ರಭುತ್ವದ ಆಡಳಿತ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವಲ್ಲಿ ಇವು ಪರಿಣಾಮಕಾರಿ. ವಾರ್ಡ್ ಸಮಿತಿ ಸಭೆಯಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.