ADVERTISEMENT

ಜನರ ದುಡ್ಡು ಅನ್ಯ ಯೋಜನೆಗಳಲ್ಲಿ ಹೂಡಿಕೆ!

ನಿತೇಶ್ ಕನ್‌ಸ್ಟ್ರಕ್ಷನ್ ಕಂಪನಿ ವಂಚನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:46 IST
Last Updated 4 ಏಪ್ರಿಲ್ 2019, 19:46 IST

ಬೆಂಗಳೂರು: ಕಡಿಮೆ ಬೆಲೆಗೆ ವಿಲ್ಲಾಗಳನ್ನು ನೀಡುವುದಾಗಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿದ್ದ ‘ನಿತೀಶ್ ಕನ್‌ಸ್ಟ್ರಕ್ಷನ್’ ರಿಯಲ್ ಎಸ್ಟೇಟ್ ಕಂಪನಿಯ ಮಾಲೀಕರು, ವಿಲ್ಲಾ ನಿರ್ಮಿಸುವ ಪ್ರಾಜೆಕ್ಟನ್ನು ಅರ್ಧಕ್ಕೇ ನಿಲ್ಲಿಸಿ ಗ್ರಾಹಕರ ದುಡ್ಡನ್ನು ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದರು ಎಂಬುದು ಸಿಸಿಬಿ ತನಿಖೆಯಿಂದ ಬೆಳಕಿಗೆ ಬಂದಿದೆ.

‘15 ವರ್ಷಗಳಿಂದ ನಗರದಲ್ಲಿ ವ್ಯವಹಾರ ನಡೆಸುತ್ತಿರುವ ಕಂಪನಿ ಮಾಲೀಕ ನಿತೇಶ್, ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ವಿಲ್ಲಾ ನಿರ್ಮಾಣದ ನಕ್ಷೆ ತೋರಿಸಿ 50ಕ್ಕೂ ಹೆಚ್ಚು ಮಂದಿಯಿಂದ ಹಣ ಕಟ್ಟಿಸಿಕೊಂಡಿದ್ದರು. ಆ ನಂತರ ಕೆಲವೆಡೆ ಪಾಯವನ್ನಷ್ಟೇ ತೋಡಿ ಕೆಲಸ ಸ್ಥಗಿತಗೊಳಿಸಿದ್ದರೆ, ಮತ್ತೆ ಕೆಲವಡೆ ಕಟ್ಟಡಗಳನ್ನು ಅರ್ಧ ಕಟ್ಟಿ ಹಾಗೇ ಬಿಟ್ಟಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಪ್ರಾಜೆಕ್ಟನ್ನು ಪೂರ್ಣಗೊಳಿಸುವ ಮುನ್ನವೇ, ಅಧಿಕ ಲಾಭದ ಆಸೆಗೆ ಕಟ್ಟಡಗಳ ನಿರ್ಮಾಣದ ಹಲವು ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಂಡಿದ್ದರು. ಜನರಿಂದ ಸಂಗ್ರಹಿಸಿದ್ದ ದುಡ್ಡನ್ನು, ಆ ಹೊಸ ಪ್ರಾಜೆಕ್ಟ್‌ಗಳಿಗೆ ಬಳಸಿಕೊಂಡಿದ್ದರು. ಇದರಿಂದಾಗಿ ಅ‍ಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ವಿಲ್ಲಾಗಳ ನಿರ್ಮಾಣ ಕೆಲಸ ನಡೆದಿರಲಿಲ್ಲ’ ಎಂದು ಮಾಹಿತಿ ನೀಡಿದರು.

ADVERTISEMENT

ಹಣ ಕೊಟ್ಟು ಏಳೆಂಟು ವರ್ಷ ಕಳೆದರೂ ವಿಲ್ಲಾ ಹಾಗೂ ಫ್ಲ್ಯಾಟ್ ಸಿಗದಿದ್ದಾಗ ರೊಚ್ಚಿಗೆದ್ದ ಗ್ರಾಹಕರು, ಹಲಸೂರಿನಲ್ಲಿರುವ ನಿತೇಶ್ ಕನ್‌ಸ್ಟ್ರಕ್ಷನ್ ಕಂಪನಿ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಈ ಸಂಬಂಧ ನಿತೇಶ್ ವಿರುದ್ಧ ಹಲಸೂರು ಠಾಣೆಗೆ ದೂರುಗಳನ್ನೂ ಕೊಟ್ಟಿದ್ದರು.

ದೂರು ಕೊಟ್ಟರೆ ಕ್ರಮ

‘ನಿತೇಶ್ ವಿರುದ್ಧ ಸದ್ಯ 15 ಮಂದಿ ದೂರು ಕೊಟ್ಟಿದ್ದಾರೆ. ಕಂಪನಿಗೆ ಹಣ ಪಾವತಿಸಿರುವವರು ದಾಖಲೆಗಳ ಸಮೇತ ಸಿಸಿಬಿ ಕಚೇರಿಗೆ ಹಾಜರಾಗಿ ದೂರು ಕೊಡಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.