ADVERTISEMENT

ಚಿನ್ನ ಕೊಡೋದಾಗಿ ₹1.5 ಕೋಟಿ ಹೊತ್ತೊಯ್ದರು!

​ಪ್ರಜಾವಾಣಿ ವಾರ್ತೆ
Published 23 ಮೇ 2019, 20:10 IST
Last Updated 23 ಮೇ 2019, 20:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ನರೇಂದ್ರ ಹಾಗೂ ಹೇಮ್ ಚೌಧರಿ ಎಂಬುವರು ‌6.5 ಕೆ.ಜಿ ಚಿನ್ನ ಅಡಮಾನವಿಡುವುದಾಗಿ ನಂಬಿಸಿ, ₹ 1.5 ಕೋಟಿ ನಗದು ಪಡೆದು ಪರಾರಿಯಾಗಿದ್ದಾರೆ’ ಎಂದು ಆರೋಪಿಸಿ ‘ಹಿಂದೂಸ್ಥಾನ್ ಗೋಲ್ಡ್’ ಕಂಪನಿ ನೌಕರ ಲೋಕೇಶ್ ಎಂಬುವರು ಹಲಸೂರು ಗೇಟ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ರಾಜರಾಜೇಶ್ವರಿನಗರ ನಿವಾಸಿ ಸುಧಾ ಎಂಬುವರು ಎರಡು ವರ್ಷಗಳಿಂದ ಪರಿಚಯ. ಪರಿಚಿತರಿಂದ ನಮ್ಮ ಕಂಪನಿಯಲ್ಲಿ ಚಿನ್ನ ಅಡವಿರಿಸಿ ಹಣ ಕೊಡಿಸುವ ಕೆಲಸ ಮಾಡುತ್ತಿದ್ದರು. ಅಂತೆಯೇ ಇತ್ತೀಚೆಗೆ ನರೇಂದ್ರ (26) ಹಾಗೂ ಹೇಮ್‌ (60) ಎಂಬುವರನ್ನು ರಾಜರಾಜೇಶ್ವರಿನಗರದ ಶಾಖೆಗೆ ಕರೆದುಕೊಂಡು ಬಂದು ನಮಗೆಲ್ಲ ಪರಿಚಯ ಮಾಡಿಸಿದ್ದರು’ ಎಂದು ಲೋಕೇಶ್ ದೂರಿನಲ್ಲಿ ವಿವರಿಸಿದ್ದಾರೆ.

‘ಮೇ 18ರಂದು ಕಂಪನಿ ಮುಖ್ಯಸ್ಥ ಮಹಮದ್ ಶಬಿ ಅವರಿಗೆ ಕರೆ ಮಾಡಿದ್ದ ಸುಧಾ, ‘ನರೇಂದ್ರ ಹಾಗೂ ಹೇಮ್ ಅವರಿಂದ 6.5 ಕೆ.ಜಿ ಚಿನ್ನ ಕೊಡಿಸುತ್ತೇನೆ. ಅವರಿಗೆ ಕೊಡಲು ₹ 1.5 ಕೋಟಿ ಹಣ ಕಳುಹಿಸಿ’ ಎಂದಿದ್ದರು. ಶಬಿ ಅವರ ಸೂಚನೆಯಂತೆ ಮೇ 19ರ ಸಂಜೆ ಹಣ ತೆಗೆದುಕೊಂಡು ನಾನು ಹಾಗೂ ಮೂವರು ಸ್ನೇಹಿತರು ಕಾರ್ಪೊರೇಷನ್ ವೃತ್ತದ ಪೈ ಹೋಟೆಲ್‌ ಬಳಿ ತೆರಳಿದ್ದೆವು.’

ADVERTISEMENT

‘ಕಾರಿನಲ್ಲಿ ಅಲ್ಲಿಗೆ ಬಂದು ಸುಧಾ ಅವರ ಸಮ್ಮುಖದಲ್ಲೇ ಹಣ ಪಡೆದ ಅವರಿಬ್ಬರೂ, ‘ಹತ್ತಿರದ ಹೋಟೆಲ್‌ನ ರೂಮ್‌ನಲ್ಲೇ ಚಿನ್ನ ಇಟ್ಟಿದ್ದೇವೆ. ಹೋಗಿ ತೆಗೆದುಕೊಂಡು ಬರುತ್ತೇವೆ’ ಎಂದು ಹೇಳಿ ಹೊರಟು ಹೋದರು. ತುಂಬ ಹೊತ್ತು ಕಳೆದರೂ ವಾಪಸ್ ಬರಲೇ ಇಲ್ಲ. ಕರೆ ಮಾಡಿದರೆ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿತ್ತು.’

‘ಅವರಿಬ್ಬರನ್ನೂ ಪತ್ತೆ ಮಾಡಿನಮ್ಮ ಚಿನ್ನ ವಾಪಸ್ ಕೊಡಿಸಬೇಕು ಹಾಗೂ ಸುಧಾ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು’ ಎಂದು ಲೋಕೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ. ವಂಚನೆ (ಐಪಿಸಿ 420) ಆರೋಪದಡಿ ಎಫ್‌ಐಆರ್ ಖಲಿಸಿಕೊಂಡಿರುವ ಪೊಲೀಸರು, ಸುಧಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೇಮ್ ಹಾಗೂ ನರೇಂದ್ರ ಕೆಂಗೇರಿ ನಿವಾಸಿಗಳು ಎಂದಷ್ಟೇ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.