ADVERTISEMENT

ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 17:50 IST
Last Updated 18 ಡಿಸೆಂಬರ್ 2021, 17:50 IST
ಸ್ಯಾಂಕಿ ರಸ್ತೆಯ ಭಾಷ್ಯಂ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ
ಸ್ಯಾಂಕಿ ರಸ್ತೆಯ ಭಾಷ್ಯಂ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಸ್ಮಾರಕ   

ಬೆಂಗಳೂರು: ಸ್ಯಾಂಕಿ ರಸ್ತೆಯ ಭಾಷ್ಯಂ ವೃತ್ತದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕದ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿದ್ದು, ಈ ಬಗ್ಗೆ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಸ್ಯಾಂಕಿ ಕೆರೆಗೆ ಹೊಂದಿಕೊಂಡಿರುವ ಉದ್ಯಾನದಲ್ಲಿ ಶಿವಾಜಿ ಪ್ರತಿಮೆ ಇದೆ. ಗುರುವಾರ ರಾತ್ರಿ ಕಿಡಿಗೇಡಿಗಳು ಉದ್ಯಾನದೊಳಗೆ ನುಗ್ಗಿ ಪ್ರತಿಮೆಗೆ ಮಸಿ ಬಳಿದಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್ ಹೇಳಿದರು.

‘ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದ್ದರು. ಸದ್ಯ ಸ್ಥಳದಲ್ಲಿ ಬಿಗಿ ಭದ್ರತೆ ಇದೆ. ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೂಡಬಾರದು’ ಎಂದೂ ಅವರು ತಿಳಿಸಿದರು.

ADVERTISEMENT

ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ (ಐಪಿಸಿ 153–ಎ) ಹಾಗೂ ಸಾರ್ವಜನಿಕರ ಆಸ್ತಿಗೆ ನಷ್ಟ ಉಂಟು ಮಾಡಿದ (ಐಪಿಸಿ 427) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಅನುಚೇತ್ ಮಾಹಿತಿ ನೀಡಿದರು.

ಘಟನೆ ಬಗ್ಗೆ ಟ್ವೀಟ್ ಮಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ‘ಬೆಂಗಳೂರಿನಲ್ಲಿ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಕಿಡಿಗೇಡಿಗಳು ಮಸಿ ಬಳಿದಿರುವ ಘಟನೆ ಖಂಡನೀಯ. ತಾಯ್ನಾಡಿನ ರಕ್ಷಣೆಗಾಗಿ ಹಾಗೂ ಹಿಂದೂಸ್ಥಾನವನ್ನು ಒಗ್ಗೂಡಿಸಲು ಶ್ರಮಿಸಿದಹೆಮ್ಮೆಯ ನಾಯಕ ಶಿವಾಜಿ ಮಹಾರಾಜರು. ಆದರೆ, ಇಂತಹ ಅಪ್ರತಿಮ ವೀರರ ಪ್ರತಿಮೆಗೆ ಮಸಿ ಬಳಿದಿರುವುದು ಆಪಾದನೀಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.