ADVERTISEMENT

ಬೆಂಗಳೂರು: ಕಾರಿನ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ಸಾವು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 14:29 IST
Last Updated 17 ನವೆಂಬರ್ 2025, 14:29 IST
   

ಪೀಣ್ಯ ದಾಸರಹಳ್ಳಿ: ಕಾರನ್ನು ಹಿಮ್ಮುಖವಾಗಿ (ರಿವರ್ಸ್‌) ತೆಗೆಯುವಾಗ ಚಕ್ರಕ್ಕೆ ಸಿಲುಕಿ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಟದ ಗುಡ್ಡದಹಳ್ಳಿ ಬೆನಕ ಲೇಔಟ್‌ನಲ್ಲಿ ಭಾನುವಾರ ನಡೆದಿದೆ.

ನೂತನ್ ಮೃತಪಟ್ಟ ಮಗು.

ಅಕ್ಕನ ಮನೆಗೆ ಮುನೇಶ್ ಅವರು ಬಂದಿದ್ದರು. ಜತೆಗೆ ಪುತ್ರ ನೂತನ್‌ನನ್ನು ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಊಟ, ಮಾತುಕತೆ ಮುಗಿಸಿ ವಾಪಸ್ ಮನೆಗೆ ಹೋಗಲು ಕಾರನ್ನು ಹಿಂದಕ್ಕೆ ತೆಗೆಯುವ ಸಂದರ್ಭದಲ್ಲಿ ಮಗು ಚಕ್ರದಡಿ ಸಿಲುಕಿ ಮೃತಪಟ್ಟಿದೆ.

ADVERTISEMENT

ಮನೆ ಸಮೀಪ ಆಟವಾಡುತ್ತಿದ್ದ ಮಗು ಏಕಾಏಕಿ ಕಾರಿನ ಬಳಿ ಬಂದಿದೆ. ಗಮನಕ್ಕೆ ಬಾರದೆ ವಾಹನ ಹಿಂದಕ್ಕೆ ಚಲಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.

ಕಣ್ಣೆದುರಿಗೆ ಪುಟ್ಟ ಮಗು ಮೃತಪಟ್ಟ ದೃಶ್ಯ ಕಂಡು ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದೆಯೂ ಇದೇ ಮಾದರಿ ಘಟನೆ: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಅ.10ರಂದು ಮನೆಯೊಂದರ ಎದುರು ನಿಲುಗಡೆ ಮಾಡಿದ್ದ ಕಾರನ್ನು ಹಿಮ್ಮುಖವಾಗಿ (ರಿವರ್ಸ್‌) ತೆಗೆಯುವ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿ 11 ತಿಂಗಳ ಮಗು ಮೃತಪಟ್ಟಿತ್ತು.

2023ರ ಡಿಸೆಂಬರ್‌ನಲ್ಲೂ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕಸವನಹಳ್ಳಿಯಲ್ಲಿ ಇರುವ ಸಮೃದ್ಧಿ ಅಪಾರ್ಟ್‌ಮೆಂಟ್‌ ಸಮುಚ್ಚಯದ ಎದುರು ಕಾರಿನ ಚಕ್ರ ಮೈ ಮೇಲೆ ಹರಿದು ಮೂರು ವರ್ಷದ ಹೆಣ್ಣು ಮಗು ಅರ್ಬಿನಾ ಮೃತಪಟ್ಟಿತ್ತು. ಬೆಳ್ಳಂದೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಮಗು ಅರ್ಬಿನಾ, ಅಪಾರ್ಟ್‌ಮೆಂಟ್ ಸಮುಚ್ಚಯದ ಪ್ರವೇಶ ದ್ವಾರದಲ್ಲಿ ಆಟವಾಡುತ್ತಾ ಕುಳಿತಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಚಾಲಕ ಸುಮನ್, ಪಾರ್ಕಿಂಗ್‌ನಲ್ಲಿದ್ದ ಕಾರು ಚಲಾಯಿಸಿಕೊಂಡು ರಸ್ತೆಯತ್ತ ಸಾಗಿದ್ದರು. ಪ್ರವೇಶ ದ್ವಾರದಲ್ಲಿದ್ದ ಮಗುವನ್ನು ಗಮನಿಸಿರಲಿಲ್ಲ. ಮಗುವಿನ ಮೇಲೆಯೇ ಕಾರಿನ ಚಕ್ರ ಹರಿದಿತ್ತು. ಸುಮನ್ ಸಹ ಸ್ಥಳದಿಂದ ಹೊರಟು ಹೋಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಿದಾಗ ಕಾರಿನ ಚಕ್ರ ಹರಿದು ಮಗು ಮೃತಪಟ್ಟಿದ್ದು ಗೊತ್ತಾಗಿತ್ತು.

ನಗರದಲ್ಲಿ ಇಂತಹ ಘಟನೆಗಳು ಸಾಕಷ್ಟು ನಡೆದಿದ್ದು, ವಾಹನ ಚಾಲಕರು ತಮ್ಮ ವಾಹನಗಳನ್ನು ತೆಗೆಯುವಾಗ ಹಿಂದೆ, ಮುಂದೆ ಪರಿಶೀಲಿಸಬೇಕು. ಮಕ್ಕಳಿದ್ದರೆ ಬಹಳ ಜಾಗ್ರತೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.