ADVERTISEMENT

ದೃಷ್ಟಿ ಕಳೆದುಕೊಳ್ಳುವ ಸ್ಥಿತಿಯಲ್ಲಿ ಬಾಲಕ

* ಒಂದನೇ ತರಗತಿಯ ವಿದ್ಯಾರ್ಥಿಯ ಕಣ್ಣಿಗೆ ತೀವ್ರ ಗಾಯ; * ಪ್ರಾಚಾರ್ಯ, ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2019, 19:34 IST
Last Updated 1 ಸೆಪ್ಟೆಂಬರ್ 2019, 19:34 IST

ಬೆಂಗಳೂರು: ಹೊಸಕೆರೆಹಳ್ಳಿ ಕೆರೆಕೋಡಿ ಬಳಿಯ ಶಾರದಶ್ರೀ ಪಬ್ಲಿಕ್ ಸ್ಕೂಲ್‌ನಲ್ಲಿ 1ನೇ ತರಗತಿ ವಿದ್ಯಾರ್ಥಿ ಸೋನೇಶ್‌ ಎಂಬಾತನ ಕಣ್ಣಿಗೆ ತೀವ್ರ ಗಾಯವಾಗಿದ್ದು, ನಿರ್ಲಕ್ಷ್ಯ ವಹಿಸಿದ ಆರೋಪದಡಿ ಪ್ರಾಚಾರ್ಯ ಹಾಗೂ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಬಾಲಕನ ಎಡ ಕಣ್ಣಿನ ಕಾರ್ನಿಯಾ ಒಡೆದು ಹೋಗಿದ್ದು, ಹೊಸಕೆರೆಹಳ್ಳಿಯ ವಿಠ್ಠಲ್ ನೇತ್ರ ಚಿಕಿತ್ಸಾಲಯದಲ್ಲಿ ದಾಖಲಿಸಲಾಗಿದೆ. ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು, ದೃಷ್ಟಿ ಬರುವ ಸಾಧ್ಯತೆಗಳು ಕಡಿಮೆ ಎಂಬುದಾಗಿ ಹೇಳುತ್ತಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಂದೆಯಿಂದ ದೂರು: ಘಟನೆ ಸಂಬಂಧ ಬಾಲಕನ ತಂದೆ ಭಾನುಪ್ರಕಾಶ್ ಗಿರಿನಗರ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

‘ಆಗಸ್ಟ್ 29ರಂದು ಬೆಳಿಗ್ಗೆ ಮಗ ಸೋನೇಶ್‌ನನ್ನು ವಾಹನದಲ್ಲಿ ಶಾಲೆಗೆ ಕಳುಹಿಸಿದ್ದೆವು. ಮಧ್ಯಾಹ್ನ ಆತ ವಾಪಸು ಬಂದಿರಲಿಲ್ಲ. ಶಾಲೆಯಿಂದ ಕರೆ ಮಾಡಿದ್ದ ಸಿಬ್ಬಂದಿ, ನಿಮ್ಮ ಮಗ ಮೆಟ್ಟಿಲಿನಿಂದ ಇಳಿಯುವಾಗ ಯಾರೋ ಹುಡುಗರ ಉಗುರು ಎಡಕಣ್ಣಿಗೆ ತಾಗಿ ಸಣ್ಣ ಗಾಯವಾಗಿದೆ. ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದು ಬಿಡುವುದಾಗಿ ಹೇಳಿದ್ದರು’ ಎಂದು ದೂರಿನಲ್ಲಿ ಭಾನುಪ್ರಕಾಶ್ ತಿಳಿಸಿದ್ದಾರೆ.

‘ಕರೆ ಮಾಡಿದ್ದ ಪ್ರಾಚಾರ್ಯ, ಸೋನೇಶ್‌ನನ್ನು ಹೊಸಕೆರೆಹಳ್ಳಿಯ ವಿಠ್ಠಲ್ ಕಣ್ಣಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದ್ದರು. ಆಸ್ಪತ್ರೆಗೆ ಹೋಗಿ ವೈದ್ಯರನ್ನು ವಿಚಾರಿಸಿದಾಗ, ಮಗನ ಕಣ್ಣಿಗೆ ದೊಡ್ಡ ಗಾಯವಾಗಿರುವುದು ಗೊತ್ತಾಯಿತು. ಗಾಯ ಹೇಗಾಯಿತು ಎಂದು ಕೇಳಿದ್ದಕ್ಕೆ ಪ್ರಾಚಾರ್ಯ ಉಡಾಫೆ ಉತ್ತರ ನೀಡಿದರು’ ಎಂದು ದೂರಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.