ADVERTISEMENT

ಮಕ್ಕಳನ್ನು ಕದ್ದು ಮಾರುತ್ತಿದ್ದ ಮಹಿಳೆಯರ ಬಂಧನ

ಖರೀದಿ ಸೋಗಿನಲ್ಲಿ ಪೊಲೀಸರ ಕಾರ್ಯಾಚರಣೆ * ರೈಲು ನಿಲ್ದಾಣದಲ್ಲೇ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 21:00 IST
Last Updated 11 ಏಪ್ರಿಲ್ 2021, 21:00 IST

ಬೆಂಗಳೂರು: ನಗರದಲ್ಲಿ ಮಕ್ಕಳನ್ನು ಕದ್ದು ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ದೇವಿ ಹಾಗೂ ಮುಂಬೈನ ರಂಜಿತಾ ಬಂಧಿತರು. ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ ದೇವಿ, ಶಿವಾಜಿನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ರಂಜಿತಾ ಜೊತೆ ನಿರಂತರವಾಗಿ ಒಡನಾಟವಿಟ್ಟುಕೊಂಡು ಕೃತ್ಯ ಎಸಗುತ್ತಿದ್ದಳು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪಿಯುಸಿ ವ್ಯಾಸಂಗ ಮಾಡಿದ್ದ ರಂಜಿತಾ, ಮಕ್ಕಳಾಗದವರಿಗಾಗಿ ಬಾಡಿಗೆ ತಾಯಂದಿರನ್ನು ಹುಡುಕುವ ಕೆಲಸ ಮಾಡುತ್ತಿದ್ದಳು. ಅದರಿಂದಾಗಿ ಹಲವು ಜನರು ಆಕೆಗೆ ಪರಿಚಯವಾಗಿದ್ದರು. ದೇವಿ ಜೊತೆ ಸೇರಿ ತನ್ನದೇ ಜಾಲ ರೂಪಿಸಿಕೊಂಡು ಮಕ್ಕಳ ಮಾರಾಟ ಮಾಡಲಾರಂಭಿಸಿದ್ದಳು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಚಾಮರಾಜಪೇಟೆಯಲ್ಲಿ ಮಗು ಕದ್ದಿದ್ದರು; ಚಾಮರಾಜಪೇಟೆಯ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಕಳೆದ ಮೇನಲ್ಲಿ ಹುಸ್ನಾಬಾನು ಎಂಬುವರ ಗಂಡು ಮಗು ಕಳುವಾಗಿತ್ತು. ಈ ಪ್ರಕರಣ ಸಹ ದಾಖಲಾಗಿತ್ತು. ಆದರೆ, ಆರೋಪಿಗಳು ಸಿಕ್ಕಿರಲಿಲ್ಲ. ನೊಂದ ಪೋಷಕರು, ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದ್ದರು.

ಪ್ರಕರಣ ಗಂಭೀರವಾಗುತ್ತಿದ್ದಂತೆ ಎಚ್ಚೆತ್ತ ದಕ್ಷಿಣ ವಿಭಾಗದ ಪೊಲೀಸರು, ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಮಕ್ಕಳನ್ನು ಖರೀದಿ ಮಾಡುವ ಸೋಗಿನಲ್ಲೇ ಕಾರ್ಯಾಚರಣೆ ನಡೆಸಿ ರೈಲು ನಿಲ್ದಾಣದಲ್ಲೇ ದೇವಿಯನ್ನು ಬಂಧಿಸಿದ್ದಾರೆ. ಆಕೆ ನೀಡಿದ್ದ ಹೇಳಿಕೆ ಆಧರಿಸಿ ರಂಜಿತಾಳನ್ನು ಸೆರೆ ಹಿಡಿದಿದ್ದಾರೆ.

ಆಸ್ಪತ್ರೆ, ಕೊಳಗೇರಿಯಲ್ಲಿ ಮಕ್ಕಳ ಕಳವು: ‘ಆಸ್ಪತ್ರೆಯಲ್ಲಿ ಜನಿಸುತ್ತಿದ್ದ ಮಕ್ಕಳು ಹಾಗೂ ಕೊಳಗೇರಿಯಲ್ಲಿರುತ್ತಿದ್ದ ಮಕ್ಕಳನ್ನೇ ಆರೋಪಿಗಳು ಕಳವು ಮಾಡುತ್ತಿದ್ದರು. ಪೋಷಕರು ಬಡವರಾಗಿರುವುದರಿಂದ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಹೆಚ್ಚು ಹೋಗುವುದಿಲ್ಲವೆಂದು ಆರೋಪಿಗಳು ತಿಳಿದುಕೊಂಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಕ್ಕಳಿಲ್ಲದ ಶ್ರೀಮಂತರನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ‘ಬಾಡಿಗೆ ತಾಯಂದಿರಿಂದ ಮಗು ಪಡೆಯಲು ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ. ನಮ್ಮದೇ ಸಂಬಂಧಿಕರ ಮಕ್ಕಳಿದ್ದು, ಅವರಿಗೆ ಸಾಕಲು ಆಗುವುದಿಲ್ಲ. ಕಡಿಮೆ ಮೊತ್ತಕ್ಕೆ ಮಕ್ಕಳನ್ನು ಮಾರುತ್ತಿದ್ದಾರೆ’ ಎನ್ನುತ್ತಿದ್ದರು. ಅದನ್ನು ನಂಬಿ ಹಲವರು ಮಕ್ಕಳನ್ನು ಖರೀದಿಸಿದ್ದಾರೆ. ಆ ಮಕ್ಕಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘ಆರ್ಥಿಕ ಸಂಕಷ್ಟದಲ್ಲಿದ್ದ ಕೆಲ ಪೋಷಕರಿಗೆ ₹ 1 ಲಕ್ಷದಿಂದ ₹ 2 ಲಕ್ಷ ಕೊಟ್ಟು ಮಕ್ಕಳನ್ನು ಆರೋಪಿಗಳೇ ಖರೀದಿ ಮಾಡಿರುವ ಮಾಹಿತಿ ಇದೆ. ಅದೇ ಮಕ್ಕಳನ್ನು ₹ 8 ಲಕ್ಷದಿಂದ ₹ 10 ಲಕ್ಷಕ್ಕೆ ಮಾರಾಟ ಮಾಡಿರುವ ಸಂಗತಿಯೂ ತನಿಖೆಯಿಂದ ಗೊತ್ತಾಗಿದೆ. ಮಕ್ಕಳ ಮಾರಾಟ ಜಾಲದಲ್ಲಿ ಮತ್ತಷ್ಟು ಜನ ಭಾಗಿಯಾಗಿದ್ದಾರೆ’ ಎಂದೂ ‍ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.