ADVERTISEMENT

‘ವಯಸ್ಸು ಏರಿಕೆ ಮುನ್ನ ಕಾನೂನು ಬಿಗಿಗೊಳಿಸಿ’

ಯುವತಿಯರ ವಿವಾಹ ವಯಸ್ಸು 18ರಿಂದ 21ಕ್ಕೆ ಏರಿಕೆ ಪ್ರಸ್ತಾವ * ಶಿಕ್ಷಣ –ಆರೋಗ್ಯ ಪರಿಸ್ಥಿತಿ ಸುಧಾರಿಸಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2020, 17:05 IST
Last Updated 24 ಆಗಸ್ಟ್ 2020, 17:05 IST

ಬೆಂಗಳೂರು: ‘ಯುವತಿಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಮಾತ್ರದಿಂದ ಸಮಸ್ಯೆಗೆ ಪರಿಹಾರ ದೊರೆತಂತೆ ಆಗುವುದಿಲ್ಲ. ಬೇರೆ ಆಯಾಮಗಳು ಸುಧಾರಿಸದ ಹೊರತು ಮಹಿಳೆಯರ ಏಳಿಗೆ ಸಾಧ್ಯವಾಗದು...’

ಯುವತಿಯರ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಕೇಂದ್ರಸರ್ಕಾರದ ಪ್ರಸ್ತಾವದ ಕುರಿತು ‘ಯಂಗ್‌ ವಾಯ್ಸಸ್‌–ನ್ಯಾಷನಲ್‌ ವರ್ಕಿಂಗ್‌ ಗ್ರೂಪ್‌’ ಸೋಮವಾರ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಚರ್ಚೆಯಲ್ಲಿ ಮಹಿಳಾವಾದಿಗಳು ಹೇಳಿದ ಮಾತಿದು.

’ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಯುವತಿಯರ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿದೆ ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯಪಡೆ ರಚಿಸಿದ್ದು, ಈ ಕುರಿತು ವರದಿ ನೀಡುವ ನಿಟ್ಟಿನಲ್ಲಿ 2020ರ ಜೂನ್‌ 4ರಿಂದ ಕಾರ್ಯಪಡೆಯು ಕಾರ್ಯ ಪ್ರಾರಂಭಿಸಿದೆ‘ ಎಂದೂ ತಿಳಿಸಿದ್ದರು.

ADVERTISEMENT

ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಧು ಮೆಹ್ರಾ, ‘ವಯಸ್ಸಿನ ಮಿತಿ ಏರಿಕೆಯಿಂದ ವಾಸ್ತವದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಯುವತಿಯರಿಗೆ ಶಿಕ್ಷಣ ಒದಗಿಸುವ ಮತ್ತು ಅವರ ಆರೋಗ್ಯ ಸುಧಾರಿಸುವ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿದೆ. ಈಗಾಗಲೇ ಬಾಲ್ಯವಿವಾಹ ನಿಷೇಧ ಕಾಯ್ದೆ ಇದೆ. ಆದರೆ, ಬಾಲ್ಯವಿವಾಹಗಳ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಸಮಸ್ಯೆ ಪರಿಹಾರವಾಗುತ್ತಿಲ್ಲ ಎಂದ ಮೇಲೆ ಕಾನೂನು ಮಾಡಿ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಈ ಕಾಯ್ದೆ ಜಾರಿಗೆ ಬಂದು 14 ವರ್ಷಗಳಾದವು. ಆದರೆ, ಅಂತರ್ಜಾತಿ ವಿವಾಹವಾಗುವ ಬಾಲಕ–ಬಾಲಕಿಯರನ್ನು ಮಾತ್ರ ಗುರಿ ಮಾಡಲಾಗುತ್ತಿದೆ. ಅದರಲ್ಲಿಯೂ, ಹುಡುಗಿಯರ ಪೋಷಕರು ಮಕ್ಕಳನ್ನು ಶಿಕ್ಷಿಸುವ ಆಯುಧವನ್ನಾಗಿ ಈ ಕಾಯ್ದೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಪೋಷಕರ ಒಪ್ಪಿಗೆಯೊಂದಿಗೆ ನಡೆಯುವ ಬಾಲ್ಯವಿವಾಹಗಳ ವೇಳೆ, ಈ ಕಾನೂನು ಲೆಕ್ಕಕ್ಕೇ ಇರುವುದಿಲ್ಲ’ ಎಂದು ಅವರು ಉದಾಹರಿಸಿದರು. ‘ಇಂತಹ ವಿವಾಹಗಳನ್ನು ತಡೆಯದ ಹೊರತು, ವಿವಾಹ ವಯಸ್ಸು ಏರಿಸುವುದರಿಂದ ಏನೂ ಪ್ರಯೋಜನವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

‘ಯಂಗ್‌ ವಾಯ್ಸ್‌ನ ಕವಿತಾ ರತ್ನ, ‘ಬಡತನ ಸ್ಥಿತಿ ಮುಂದುವರಿಯುತ್ತಲೇ ಇರುವಾಗ, ಅವರ ಜೀವನಮಟ್ಟ ಸುಧಾರಿಸಲು, ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳದೆ ವಿವಾಹ ವಯಸ್ಸು ಏರಿಸುವುದರಿಂದ ಪ್ರಯೋಜನವಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳು, ಉದ್ಯೋಗಾವಕಾಶ ಕೊರತೆಯೇ ಬಾಲ್ಯವಿವಾಹಗಳಿಗೆ ಕಾರಣವಾಗುತ್ತದೆ. ಈ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.