
ಬೆಂಗಳೂರು: ರಸ್ತೆಯ ಎರಡೂ ಬದಿಯಲ್ಲಿ ಎತ್ತ ನೋಡಿದರತ್ತ ಬಣ್ಣ–ಬಣ್ಣಗಳ ಚಿತ್ತಾರ, ಕಲಾವಿದನ ಕುಂಚದಲ್ಲಿ ಅರಳಿದ ಗ್ರಾಮೀಣ ಸೊಗಡು, ಪ್ರಕೃತಿಯ ವೈಭವ, ಮರಳಿನಲ್ಲಿ ಅರಳಿದ ಹುಲಿ, ಚಿರತೆಯ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಬಂದಿತ್ತು.
ಈ ದೃಶ್ಯ ಕಂಡು ಬಂದದ್ದು ಕುಮಾರ ಕೃಪಾ ರಸ್ತೆಯಲ್ಲಿ. ಕರ್ನಾಟಕ ಚಿತ್ರಕಲಾ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ 23ನೇ ಚಿತ್ರಸಂತೆಯಲ್ಲಿ ಕಲಾಲೋಕವೇ ಅನಾವರಣಗೊಂಡಿತ್ತು. ಈ ಚಿತ್ರಸಂತೆಯು ಕಲಾವಿದರ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜತೆಗೆ ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೂ ಅವಕಾಶ ಒದಗಿಸಿತ್ತು. ಚಿತ್ರಸಂತೆಯು ಕಲಾವಿದರು ಮತ್ತು ಕಲಾಸಕ್ತರ ನಡುವೆ ಬಾಂಧವ್ಯ ಬೆಸೆಯುವ ಸೇತುವೆಯಂತೆ ಭಾಸವಾಯಿತು. ವರ್ಣಮಯ ಕಲಾಕೃತಿಗಳು ಕಲಾರಸಿಕರ ಸಂಭ್ರಮವನ್ನು ಇಮ್ಮಡಿಗೊಳಿಸಿದವು.
ಈ ಬಾರಿಯ ಚಿತ್ರಸಂತೆಯನ್ನು ‘ಪರಿಸರ’ಕ್ಕೆ ಸಮರ್ಪಿಸಲಾಗಿತ್ತು. ಪರಿಷತ್ತಿನ ಪ್ರವೇಶ ದ್ವಾರದಲ್ಲಿಯೇ ಜೇನುಗೂಡಿನ ಬೃಹತ್ ಮಾದರಿ ನಿರ್ಮಿಸಲಾಗಿತ್ತು. ಇದು ನೆರೆದಿದ್ದ ಕಲಾ ಪ್ರೇಮಿಗಳ ಗಮನಸೆಳೆಯಿತು. ಪರಿಷತ್ತಿನ ಆವರಣದಲ್ಲಿ ಕಲಾಕೃತಿಗಳ ಜತೆಗೆ ಕರಕುಶಲ ವಸ್ತುಗಳು ಹಾಗೂ ಕಲಾಕೃತಿ ರಚನೆಗೆ ಅಗತ್ಯವಿರುವ ಬಣ್ಣ ಮತ್ತು ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.
ಮಹಿಳೆಯರ ವಿವಿಧ ಭಂಗಿಗಳು, ಜಲಪಾತಗಳು, ಸರೋವರ, ಕಂಬಳದ ಜೊಡೆತ್ತುಗಳು, ಐತಿಹಾಸಿಕ ದೇವಸ್ಥಾನಗಳು, ಪೌರಾಣಿಕ ಪಾತ್ರಧಾರಿಗಳು, ಮಾರುಕಟ್ಟೆಯಲ್ಲಿ ಹೂವು ಮಾರುವ ದೃಶ್ಯ, ಗೌತಮ ಬುದ್ಧ, ಗಣಪತಿ, ಶಿವನ ವಿವಿಧ ಭಂಗಿಗಳು ಹಾಗೂ ಪರಿಸರಕ್ಕೆ ಸಂಬಂಧಿಸಿದ ವಿವಿಧ ಶೈಲಿಯ ಕಲಾಕೃತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದವು. ಒಂದಕ್ಕಿಂತ ಮತ್ತೊಂದು ಕಲಾಕೃತಿಗಳು ಆಲೋಚನೆಗೆ ಹಚ್ಚಿದವು.
ರಸ್ತೆಯ ಉದ್ದಕ್ಕೂ ಭಾವಚಿತ್ರ ಹಾಗೂ ವ್ಯಂಗ್ಯ ಚಿತ್ರಗಳನ್ನು ಬಿಡಿಸುವವರು ಕಾಣಸಿಗುತ್ತಿದ್ದರು. ಪುಟ್ಟ ಮಕ್ಕಳು ಭಾವಚಿತ್ರ ಬಿಡಿಸಿಕೊಂಡು ಸಂಭ್ರಮಿಸಿದರೆ, ಯುವಕ ಯುವತಿಯರು ಹಚ್ಚೆ ಹಾಕಿಸಿಕೊಂಡು ಖುಷಿ ಪಟ್ಟರು. ಸಂತೆಗೆ ಬಂದವರಿಗಾಗಿ ಪರಿಷತ್ತಿನ ಆವರಣದಲ್ಲಿ ಫುಡ್‌ಕೋರ್ಟ್‌ನ ವ್ಯವಸ್ಥೆ ಮಾಡಲಾಗಿತ್ತು. ಸಂತೆಗೆ ಬಂದಿದ್ದ ವೃದ್ಧರು ಹಾಗೂ ಅಂಗವಿಕಲರಿಗಾಗಿ ಬಗ್ಗಿ ವಾಹನದ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೂ ಮುಖ್ಯ ರಸ್ತೆಯಲ್ಲಿ ಕಲಾ ಮಳಿಗೆಗಳು ಹಾಗೂ ತಿನಿಸು ಮತ್ತು ಇತರೆ ಗೃಹೋಪಯೋಗಿ ಹಾಗೂ ಆಲಂಕಾರಿಕ ವಸ್ತುಗಳು, ತರಹೇವಾರಿ ಆಭರಣ ಮಳಿಗೆಗಳು ಕಲಾರಸಿಕರನ್ನು ಕೈಬೀಸಿ ಕರೆಯುತ್ತಿದ್ದವು.
ದೇಶದ ವಿವಿಧ ರಾಜ್ಯಗಳಿಂದ ಬಂದಿದ್ದ ಕಲಾವಿದರ ಸಮ್ಮಿಲನಕ್ಕೆ ಚಿತ್ರಸಂತೆ ವೇದಿಕೆ ಕಲ್ಪಿಸಿತ್ತು. ₹50 ರಿಂದ ₹5 ಲಕ್ಷದವರೆಗಿನ ಕಲಾಕೃತಿಗಳಿದ್ದವು. ಕೆಲವರು ದುಬಾರಿ ಬೆಲೆ ಕೇಳಿ ಅಚ್ಚರಿಪಟ್ಟರೂ, ಕಲಾವಿದರ ಪ್ರತಿಭೆ ಮತ್ತು ಶ್ರಮಕ್ಕೆ ತಲೆದೂಗಿದರು.
ಈ ಚಿತ್ರಸಂತೆಯಲ್ಲಿ 3 ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ₹ 3 ಕೋಟಿಗೂ ಅಧಿಕ ವಹಿವಾಟು ನಡೆದಿದೆ ಎಂದು ಚಿತ್ರಕಲಾ ಪರಿಷತ್ತಿನ ಮೂಲಗಳು ತಿಳಿಸಿವೆ.
ಹಲವು ಬಗೆಯ ಕಲಾಕೃತಿಗಳ ಪ್ರದರ್ಶನ
ಚಾರಕೋಲ್ ಪೇಂಟಿಂಗ್ ಕಾಫಿ ವರ್ಕ್ ಲ್ಯಾಂಡ್ ಸ್ಕೇಪ್ ನೈಜ ಸಮಕಾಲೀನ ಹಾಗೂ ಅಮೂರ್ತ ಕಲಾಕೃತಿಗಳು ಮಧುಬನಿ ತಂಜಾವೂರು ಶೈಲಿ ಮಂಡಲ ಕಲೆ ಕಲಾಂಕಾರಿ ಕಲೆ ಸಾಂಪ್ರದಾಯಿಕ ಕಲೆ ರಾಜಸ್ಥಾನಿ ಶೈಲಿ ಮೈಸೂರು ಶೈಲಿ ಕ್ಯಾಲಿಗ್ರಫಿ ಮರದ ಕಲಾಕೃತಿಗಳು ಮ್ಯೂರಲ್ ಸೇರಿದಂತೆ ನಾನಾ ಪ್ರಕಾರದ ಕಲಾಕೃತಿಗಳು ಗಮನ ಸೆಳೆದವು. ತೆಂಗಿನ ಚಿಪ್ಪಿನಲ್ಲಿ ಮಾಡಿದ ಕಲಾಕೃತಿಗಳು ಕಲಾಸಕ್ತರನ್ನು ಆಕರ್ಷಿಸಿದವು.
‘ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ’
‘ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ ಇದ್ದಂತೆ. ಕಲಾವಿದರು ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆಯನ್ನು ಕಲ್ಪಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಚಿತ್ರ ಸಂತೆಗೆ ಚಾಲನೆ ನೀಡಿ ಮಾತನಾಡಿದ ಅವರು ‘ಕಲಾವಿದರನ್ನು ಪ್ರೋತ್ಸಾಹಿಸುವುದು ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು 60 ವರ್ಷಗಳಿಂದ ಮಾಡುತ್ತಿದ್ದು ಇದಕ್ಕೆ ನಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ’ ಎಂದರು. ‘ಪ್ರತಿಯೊಂದು ಜಿಲ್ಲೆಯಲ್ಲಿ ಸಾಧಕರ ವಸ್ತು ಸಂಗ್ರಹಾಲಯ ನಿರ್ಮಿಸುವ ಬೇಡಿಕೆಯಿದ್ದು ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕರಸಲಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಬೆಂಗಳೂರು ನಗರ ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದೆ. ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ’ ಎಂದರು. ‘ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು’ ಎಂದು ಭರವಸೆ ನೀಡಿದರು. ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಉಪಸ್ಥಿತರಿದ್ದರು.
ಪ್ರಮುಖ ಅಂಶಗಳು
* ಬೆಂಗಳೂರಿನ ಕಲಾವಿದ ಭರಣಿ ಧರಣ್ ಅವರು ತೈಲವರ್ಣದಲ್ಲಿ ರಚಿಸಿದ ನವಿಲುಗಳ ಕಲಾಕೃತಿಯು ₹1 ಲಕ್ಷಕ್ಕೆ ಮಾರಾಟವಾಯಿತು. ಇವರ ಹುಲಿಯ ಕಲಾಕೃತಿ ಸಂತೆಯಲ್ಲಿ ಗಮನ ಸೆಳೆಯಿತು. * ಮೈಸೂರಿನ ಕಲಾವಿದ ವೀರೇಶ್ ಅವರು ರಚಿಸಿದ ಪ್ರಕೃತಿಯೊಳಗೆ ಶಿವ ಇರುವ ಕಲಾಕೃತಿಯು ₹1.30 ಲಕ್ಷಕ್ಕೆ ಮಾರಾಟವಾಯಿತು. * ಕೊಯಮತ್ತೂರಿನ ಸತೀಶ್ ಅವರು ರಚಿಸಿದ ವಿಶ್ವದ ಪ್ರಸಿದ್ಧ ವ್ಯಕ್ತಿಗಳು ಒಂದೆಡೆ ಸೇರಿ ಕುಶಲೋಪರಿಯಲ್ಲಿ ತೊಡಗಿರುವ ಕಲಾಕೃತಿಯು ₹3 ಲಕ್ಷಕ್ಕೆ ಮಾರಾಟವಾಯಿತು. * ತಮಿಳುನಾಡಿನ ಕೊಯಮತ್ತೂರಿನ ವಿಜಯ್ ಅವರ ಹೂವು ಮಾರಾಟ ಮಾಡುವ 6 ಅಡಿ ಉದ್ದ 5 ಅಡಿ ಅಗಲದ ಕಲಾಕೃತಿಗೆ ₹3.50 ಲಕ್ಷ ದರ ನಿಗದಿಪಡಿಸಿದ್ದರು. ರೈತ ಭತ್ತದ ಪೈರು ಮುಖದ ಬಳಿ ಹಿಡಿದುಕೊಂಡಿರುವ ಕಲಾಕೃತಿಗೆ ₹1.50 ಲಕ್ಷ ಹಾಗೂ ಭತ್ತ ಪೈರು ಹಿಡಿದುಕೊಂಡು ನಗುತ್ತಿರುವ ರೈತ ಮಹಿಳೆಯ ಚಿತ್ರಕ್ಕೆ ₹2.50 ಲಕ್ಷ ದರ ನಿಗದಿಪಡಿಸಿದ್ದರು. ಮತ್ತೊಬ್ಬ ಕಲಾವಿದ ಜೀವನ್ ಅವರು ರಚಿಸಿದ ಗ್ರಾಮೀಣ ಸೊಗಡಿನ ಹಸು ಎಮ್ಮೆ ನಾಯಿ ಕುರಿಗಳನ್ನು ಹಿಡಿದು ಸಾಗುವ ರೈತ ಹಾಗೂ ಮಹಿಳೆಯ ಕಲಾಕೃತಿಗೆ ₹3 ಲಕ್ಷ ಬೆಲೆ ನಿಗದಿಪಡಿಸಿದ್ದರು. * ಸಂತೆಯಲ್ಲಿ 9.5 ಅಡಿ ಉದ್ದ ಹಾಗೂ 4.5 ಅಡಿ ಅಗಲದ ಟೀಕ್ ವುಡ್‌ನಲ್ಲಿ ನಿರ್ಮಿಸಿರುವ ಬಾಗಿಲು ಗಮನ ಸೆಳೆಯಿತು. ಇದಕ್ಕೆ ₹8 ಲಕ್ಷ ಬೆಲೆ ನಿಗದಿಪಡಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.