ADVERTISEMENT

‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ’ ಮೇಲೆ ದಾಳಿ

ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚನೆ: ದಾಳಿ ಮಾಡಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 20:34 IST
Last Updated 11 ಅಕ್ಟೋಬರ್ 2019, 20:34 IST

ಬೆಂಗಳೂರು: ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿದೆ ಎನ್ನಲಾದ ‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಂಪನಿ ಕಚೇರಿಗಳ ಮೇಲೆ ಸಿಐಡಿ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿದರು.

ಕಂಪನಿ ವಿರುದ್ಧ ನೆಲಮಂಗಲ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ತನಿಖೆಯನ್ನು ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ಸಿಐಡಿಗೆ ವಹಿಸಿದೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸಿರುವ ಸಿಐಡಿಯ ಆರ್ಥಿಕ ವಿಭಾಗದ ಪೊಲೀಸರು, ಕಚೇರಿ ಮೇಲೆ ದಾಳಿ ಮಾಡಿ ಹಲವು ದಾಖಲಾತಿಗಳನ್ನು ಸುಪರ್ದಿಗೆ ಪಡೆದರು.

‘2018ರ ಅಕ್ಟೋಬರ್‌ನಲ್ಲಿ ಸ್ಥಾಪನೆ ಆಗಿದ್ದ ಕಂಪನಿಯು ನೆಲಮಂಗಲ ಹಾಗೂ ಮತ್ತಿಕೆರೆಯಲ್ಲಿ ಕಚೇರಿಯನ್ನು ಹೊಂದಿದೆ. ಈ ಕಚೇರಿಗಳ ಮೇಲೆಯೇ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲಿಸಲಾಯಿತು. ಕೆಲಸ ಮಾಡುತ್ತಿದ್ದ ಸಿಬ್ಬಂದಿಯಿಂದಲೂ ಹೇಳಿಕೆ ಪಡೆಯಲಾಯಿತು’ ಎಂದು ಸಿಐಡಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕಂಪನಿಯ ರಮಿತ್‍ ಮಲ್ಹೋತ್ರಾ, ಜೋಜು ಥಾಮಸ್, ನಾಡಿ ನಾಯರ್ ಸೇರಿದಂತೆ ಹಲವರನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಬೇಕಿದೆ’ ಎಂದರು.

ಸುಮಾರು ₹60 ಕೋಟಿ ವಂಚನೆ: ‘ಹಣ ಹೂಡಿಕೆ ಮಾಡುವವರ ಹೆಸರಿನಲ್ಲಿ ಕಾರುಗಳನ್ನು ಖರೀದಿಸಿ ಉಬರ್ ಸೇರಿದಂತೆ ವಿವಿಧ ಟ್ರಾವೆಲ್ಸ್ ಸಂಸ್ಥೆಗಳಿಗೆ ಬಾಡಿಗೆಗೆ ನೀಡಲಾಗುವುದೆಂದು ಕಂಪನಿಯವರು ಹೇಳುತ್ತಿದ್ದರು. ಹಣ ತೊಡಗಿಸಿದವರಿಗೆ ಪ್ರತಿ ತಿಂಗಳು ₹10 ಸಾವಿರದಿಂದ ₹25 ಸಾವಿರವರೆಗೆ ಲಾಭಾಂಶ ನೀಡುವುದಾಗಿ ಹೇಳಿ ನಂಬಿಸುತ್ತಿದ್ದರು’ ಎಂದು ಅಧಿಕಾರಿ ತಿಳಿಸಿದರು.

‘ಕಂಪನಿ ಪ್ರತಿನಿಧಿಗಳ ಮಾತು ನಂಬಿ ಸಾವಿರಾರು ಮಂದಿ ಹಣ ಹೂಡಿಕೆ ಮಾಡಿದ್ದರು. ಇದುವರೆಗೂ ಸುಮಾರು 60 ಕೋಟಿಯಷ್ಟು ಹಣ ಸಂಗ್ರಹಿಸಿದ್ದ ಕಂಪನಿಯವರು ಯಾವುದೇ ಲಾಭಾಂಶವನ್ನಾಗಲೀ, ಹಣವನ್ನಾಗಲೀ ನೀಡದೇ ವಂಚಿಸಿರುವ ಮಾಹಿತಿ ಇದ್ದು, ದಾಖಲೆಗಳನ್ನು ಪರಿಶೀಲಿಸಬೇಕಿದೆ’ ಎಂದು ಅಧಿಕಾರಿ ತಿಳಿಸಿದರು.

‘ಸಾರ್ವಜನಿಕರಿಂದ ಹಣ ಪಡೆದರೂ ಅವರ ಹೆಸರಿನಲ್ಲಿ ಕಾರು ಖರೀದಿ ಮಾಡಿಲ್ಲ. ಬದಲಿಗೆ, ಕಂಪನಿ ಹೆಸರಿನಲ್ಲಿ ಕಾರು ನೋಂದಣಿ ಮಾಡಿಸಲಾಗಿದೆ’ ಎಂದರು.

ಐದು ಕಂಪನಿ ಸ್ಥಾಪನೆ: ‘ಯಲ್ಲೊ ಎಕ್ಸ್‌ಪ್ರೆಸ್ ಇಂಡಿಯಾ ಕಂಪನಿ ಅಡಿಯಲ್ಲಿ ಲಾಜಿಸ್ಟಿಕ್ಸ್, ಫೈನಾನ್ಸ್ ಆ್ಯಂಡ್ ಅರ್ನಿಂಗ್ಸ್, ಲಾಗಿನ್, ಲಕ್ಷ್ಮಿ ಕಾರ್‌ಜೋನ್ ಸೇರಿದಂತೆ ಐದು ಕಂಪನಿಗಳನ್ನು ಸ್ಥಾಪಿಸಲಾಗಿದೆ. ಆ ಕಂಪನಿಗಳ ದಾಖಲೆಗಳನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಹಿರಿಯ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.