ADVERTISEMENT

ಕಾನೂನು ವಿರೋಧಿಸುವ ಹಕ್ಕು ಇದೆ: ಸಿದ್ದರಾಮಯ್ಯ

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ಸಮರ್ಥಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2020, 21:16 IST
Last Updated 16 ಮಾರ್ಚ್ 2020, 21:16 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ದೇಶದ ಯಾವುದೇ ಕಾನೂನನ್ನು ವಿರೋಧಿಸುವ ಮತ್ತು ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಲವಾಗಿ ಪ್ರತಿಪಾದಿಸಿದರು.

ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರ ಎಷ್ಟೇ ದೊಡ್ಡ ಬಹುಮತದಿಂದ ಕಾನೂನು ಮಾಡಿದರೂ ಅದನ್ನು ಪ್ರಶ್ನಿಸಲು ಸಂವಿಧಾನ ಅವಕಾಶ ನೀಡಿದೆ ಎಂದರು.

ಇದನ್ನು ಒಪ್ಪದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ‘ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಸಮಗ್ರವಾಗಿ ಚರ್ಚೆಯಾಗಿ ಅಂಗೀಕಾರ ಪಡೆದು ರೂಪಿಸಿದ ಕಾನೂನನ್ನು ವಿರೋಧಿಸುವುದು ಸಂವಿಧಾನ ವಿರೋಧಿಯೂಆಗುತ್ತದೆ. ಸಂವಿಧಾನಕ್ಕೆ ಗೌರವ ಕೊಡುತ್ತೇನೆ ಎನ್ನುವವರು ಆಡುವ ಮಾತು ಇದಾ? ಪ್ರತಿಭಟನೆ ಹೆಸರಲ್ಲಿ ದೇಶದಲ್ಲಿ ದಂಗೆ ಎಬ್ಬಿಸಲಾಗುತ್ತಿದೆ’ ಎಂದು ಕುಟುಕಿದರು.

ADVERTISEMENT

ಚುನಾವಣೆ ಪದ್ಧತಿ ಬದಲಾಗಲಿ: ದೇಶದಲ್ಲಿ ಈಗಿನ ಚುನಾವಣಾ ಪದ್ಧತಿಯೇ ಭ್ರಷ್ಟಾಚಾರ ಹೆಚ್ಚಲು ಕಾರಣವಾಗುತ್ತಿದೆ. ಆದ್ದರಿಂದ ಚುನಾ ವಣೆ ಪದ್ಧತಿಯಲ್ಲಿ ಆಮೂಲಾಗ್ರ ಬದಲಾ ವಣೆ ತರುವುದರ ಜತೆಗೆ ಸರ್ಕಾರವೇ ಚುನಾ ವಣೆಗೆ ಹಣ ನೀಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಚುನಾವಣೆಯಲ್ಲಿ ಜಾತಿ, ಹಣ ಮತ್ತು ತೋಳ್ಬಲವೇ ಮೇಲುಗೈ ಪಡೆದಿದೆ. ಇಂತಹ ಹಿನ್ನೆಲೆಯ ವ್ಯಕ್ತಿಗಳಿಂದ ಸಂವಿಧಾನಕ್ಕೆ ನಿಷ್ಠೆ ಎಂಬುದು ದೂರದ ಮಾತು. ಚುನಾವಣೆ ವ್ಯವಸ್ಥೆ ಸುಧಾರಣೆ ಆಗದಿದ್ದರೆ ಮುಂದಿನ ದಿನ ಊಹಿಸುವುದೂ ಕಷ್ಟ ಎಂದರು.

ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರು ತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಪದ್ಧತಿ ಇರಬೇಕು. ಪರಿಶಿಷ್ಟರಿಗೆ ಸರ್ಕಾರಿ ಸೇವೆಯಲ್ಲಿ ತಕ್ಕಷ್ಟು ಪ್ರಾತಿನಿಧ್ಯ ಸಿಗದ ಕಾರಣ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿದೆ. ಬಡ್ತಿ ಭಿಕ್ಷೆಯಲ್ಲ ಅದು ಹಕ್ಕು ಎಂದು ಅವರು ಹೇಳಿದರು.

ಜಾತಿ ವ್ಯವಸ್ಥೆ ಭ್ರಷ್ಟಾಚಾರಕ್ಕೆ ದೊಡ್ಡ ಕೊಡುಗೆ ನೀಡಿದೆ. ಜಾತಿ ಹೆಸರಿನಲ್ಲಿ ಭ್ರಷ್ಟ ಅಧಿಕಾರಿಗಳಿಗೆ ನಾವು ಬೆಂಬಲ ಕೊಡುತ್ತೇವೆ. ಆ ಬಳಿಕ ಅವರೇ ತಲೆ ಮೇಲೆ ಕೂರುತ್ತಾರೆ. ಇದಕ್ಕೆ ಕಡಿವಾಣ ಬೀಳಬೇಕಾದರೆ ಜಾತಿ ವ್ಯವಸ್ಥೆ ಹೋಗಬೇಕು. ದಕ್ಷರು ಮತ್ತು ಪ್ರತಿಭಾವಂತರಿಗೆ ಅವಕಾಶ ಸಿಗಬೇಕು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮೊಟಕು ಮಾಡಬಾರದು. ಒಂದು ವೇಳೆ ಆ ರೀತಿ ಆದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಆಗುತ್ತದೆ. ವಿಧಾನಸಭೆಯಲ್ಲಿ ಟಿ.ವಿ ಚಾನೆಲ್‌ಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರು.

ಸಂವಿಧಾನ ಅರ್ಥ ಮಾಡಿಕೊಳ್ಳಬೇಕಾದರೆ, ದೇಶವನ್ನು ಅರ್ಥ ಮಾಡಿಕೊಂಡಿರಬೇಕು. ಇಲ್ಲವಾದರೆ ಸಂವಿಧಾನವನ್ನು ಅರ್ಥೈಸಿಕೊಳ್ಳ ಲಾಗದು ಎಂದರು.

ಸಂವಿಧಾನ ಕುರಿತ ಚರ್ಚೆ ಇತಿಹಾಸ ಸೃಷ್ಟಿಸಿದೆ. ಸಭಾಧ್ಯಕ್ಷರು ಅತ್ಯಂತ ಪ್ರಬುದ್ಧತೆಯಿಂದ ನಿರ್ವಹಿಸಿದ್ದಾರೆ. ಇಡೀ ಸದನವೇ ನಿಮಗೆ ನಮಸ್ಕರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.