ADVERTISEMENT

ಪ್ರತಿ ಕುಟುಂಬಕ್ಕೆ ತಲಾ ₹7,500 ನೇರ ನಗದು ವರ್ಗಾವಣೆ ಮಾಡಿ: ಬೃಂದಾ ಕಾರಟ್‌

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 9:31 IST
Last Updated 27 ಜೂನ್ 2021, 9:31 IST
ಬೃಂದಾ ಕಾರಟ್‌
ಬೃಂದಾ ಕಾರಟ್‌    

ಬೆಂಗಳೂರು: ‘ಕೋವಿಡ್‌ನಿಂದಾಗಿ ಜನರ ಜೀವನ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಪ್ರತಿ ಕುಟುಂಬಕ್ಕೆ ತಲಾ ₹7,500 ನೇರ ನಗದು ವರ್ಗಾವಣೆ ಮಾಡಬೇಕು. ಕೋವಿಡ್‌ನಿಂದ ಮೃತಪಟ್ಟಿರುವ ವ್ಯಕ್ತಿಗಳ ಕುಟುಂಬಗಳಿಗೆ ಕೂಡಲೇ ತಲಾ₹4 ಲಕ್ಷ ಪರಿಹಾರ ಪ್ರಕಟಿಸಬೇಕು. ಜೊತೆಗೆ ತಲಾ 10 ಕೆಜಿಆಹಾರ ಧಾನ್ಯ ಒದಗಿಸಬೇಕು’ ಎಂದು ಸಿಪಿಐ (ಎಂ) ಪಾಲಿಟ್‌ ಬ್ಯೂರೊ ಮುಖ್ಯಸ್ಥೆ ಬೃಂದಾ ಕಾರಟ್‌ ಭಾನುವಾರ ಒತ್ತಾಯಿಸಿದರು.

ಬೆಲೆ ಏರಿಕೆ ಖಂಡಿಸುವ ಹಾಗೂ ಕೋವಿಡ್‌ ಮೂರನೇ ಅಲೆ ಎದುರಿಸಲು ಸನ್ನದ್ಧವಾಗುವಂತೆ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಸಿಪಿಐ, ಸಿಪಿಐ (ಎಂ), ಎಸ್‌ಯುಸಿಐ (ಸಿ), ಸಿಪಿಐ (ಎಂಎಲ್‌), ಎಐಎಫ್‌ಬಿ, ಆರ್‌ಪಿಐ ಹಾಗೂ ಸ್ವರಾಜ್‌ ಇಂಡಿಯಾ ಹಮ್ಮಿಕೊಂಡಿದ್ದ ಆನ್‌ಲೈನ್‌ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಂಬಾನಿ, ಅದಾನಿ ಒಂದು ದಿನದಲ್ಲಿ ದುಡಿಯುವ ಹಣವನ್ನು ಸಾಮಾನ್ಯ ಜನ ಗಳಿಸಬೇಕಾದರೆ ಹತ್ತು ಸಾವಿರ ವರ್ಷಗಳೇ ಬೇಕು. ಸರ್ಕಾರದ ನೀತಿಗಳಿಂದಾಗಿ ಸಮಾಜದಲ್ಲಿ ಈ ಬಗೆಯ ಅಸಮಾನತೆ ಸೃಷ್ಟಿಯಾಗಿದೆ. ಜನರ ಲೂಟಿಗೆ ಇಳಿದಿರುವ ಮೋದಿ ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಬೇಕು. ಬೆಲೆ ಏರಿಕೆಯಿಂದ ಜನರನ್ನು ರಕ್ಷಿಸಬೇಕು’ ಎಂದರು.

ADVERTISEMENT

ಸಿಪಿಐನ ಬಿನೊಯ್‌ ವಿಶ್ವಂ ‘ಇದು ಪ್ರಜಾಪ್ರಭುತ್ವದ ಹಕ್ಕುಗಳನ್ನು ಉಳಿಸಿಕೊಳ್ಳುವ ಹಾಗೂ ವರ್ಗ ಸಂಘರ್ಷದ ವಿರುದ್ಧದ ಹೋರಾಟ. ಲಸಿಕೀಕರಣದ ಮೂಲಕ ಜನರ ಜೀವ ಉಳಿಸುವ ಬದಲು ಸರ್ಕಾರವು ಅವರಲ್ಲಿ ಮೂಢನಂಬಿಕೆ ಬಿತ್ತುವ ಕೆಲಸ ಮಾಡಿತು. ಕೋವಿಡ್‌ನಿಂದಾಗಿ ದೇಶದಲ್ಲಿ ಈವರೆಗೆ ನಾಲ್ಕು ಲಕ್ಷ ಜನ ಮೃತರಾಗಿದ್ದಾರೆ. ಇವರಿಗೆ ನೆರವು ನೀಡಲು ಆಗುವುದಿಲ್ಲ ಎಂದು ಹೇಳಿರುವುದು ಸರ್ಕಾರದ ನಿಜ ರೂಪವನ್ನು ತೋರಿಸುತ್ತದೆ. ಮೋದಿ ಸರ್ಕಾರ ಕೋವಿಡ್ ಸಮಯದಲ್ಲೇ ಕೋಮುವಾದದ ವಿಷ ಬೀಜ ಬಿತ್ತುವ ಮೂಲಕ ದೇಶ ನಾಶಮಾಡಲು ಹೊರಟಿದೆ’ ಎಂದು ಕಿಡಿಕಾರಿದರು.

ಎಸ್‌ಯುಸಿಐ (ಸಿ) ಪಾಲಿಟ್‌ ಬ್ಯೂರೊ ಸದಸ್ಯ ಕೆ.ರಾಧಾಕೃಷ್ಣ ‘ಕೋವಿಡ್‌ ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಅದಕ್ಕೆ ಕಡಿವಾಣ ಹಾಕಲು ಅಗತ್ಯ ಯೋಜನೆ ರೂಪಿಸುವ ಬದಲು ಪ್ರಧಾನಿಯವರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದರು. ಮೋದಿ ಸರ್ಕಾರ ಕಾರ್ಪೊರೇಟ್‌ ಪರವಾದ ನಿಲುವುಗಳನ್ನು ತಳೆದಿದೆ. ಎಲ್ಲಾ ಕ್ಷೇತ್ರಗಳನ್ನೂ ಖಾಸಗೀಕರಣಗೊಳಿಸುತ್ತಿದೆ. ಪಡಿತರ ವ್ಯವಸ್ಥೆ ಹಾಳು ಮಾಡಿದ್ದಲ್ಲದೆ, ಜನಸಾಮಾನ್ಯರ ಸುಲಿಗೆಗೂ ಇಳಿದಿದೆ’ ಎಂದು ಆರೋಪಿಸಿದರು.

ಸಿಪಿಐ (ಎಂಎಲ್‌) ಪಾಲಿಟ್‌ ಬ್ಯೂರೊ ಸದಸ್ಯೆ ಕವಿತಾ ಕೃಷ್ಣನ್‌ ‘ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದಾರೆ. ಯುವಕರು ಕೂಡ ಕೋವಿಡ್‌ನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಸರ್ಕಾರ ವತಿಯಿಂದ ನಡೆಯುತ್ತಿರುವ ಕೊಲೆ. ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿದರು.

ಎಐಎಫ್‌ಬಿ ರಾಷ್ಟ್ರೀಯ ಮಂಡಳಿಯ ಕಾರ್ಯದರ್ಶಿಜಿ.ದೇವರಾಜನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.