ADVERTISEMENT

ಮಳಿಗೆ ಎದುರು ನಿದ್ದೆ: ವಾಹನ ಹರಿದು ಹಕ್ಕಿಪಿಕ್ಕಿ ಬಾಲಕಿ ಸಾವು

* ಅಲಂಕಾರಿಕ ವಸ್ತು ಮಾರಲು ಬಂದಿದ್ದ ಹಕ್ಕಿಪಿಕ್ಕಿ ಕುಟುಂಬ * ಊರಿಗೆ ವಾಪಸು ಹೋಗುವಾಗ ಅವಘಡ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 19:26 IST
Last Updated 29 ಮಾರ್ಚ್ 2022, 19:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ನಸುಕಿನಲ್ಲಿ ಅಪಘಾತ ಸಂಭವಿಸಿದ್ದು, ಬೊಲೆರೊ ವಾಹನದ ಚಕ್ರ ಮೈಮೇಲೆ ಹರಿದು ಏಳು ವರ್ಷದ ಬಾಲಕಿ ಶಿವನ್ಯಾ ಮೃತಪಟ್ಟಿದ್ದಾಳೆ.

‘ಮೃತ ಶಿವನ್ಯಾ, ತಮಿಳುನಾಡು ವೆಲ್ಲೂರಿನ ಹಕ್ಕಿಪಿಕ್ಕಿ ಜನಾಂಗದವಳು. ಅಪಘಾತದಿಂದ ತೀವ್ರ ಗಾಯಗೊಂಡು ಬಾಲಕಿ ಅಸುನೀಗಿದ್ದಾಳೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೊಲೆರೊ ಗೂಡ್ಸ್ ವಾಹನದ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ. ಮೃತ ಬಾಲಕಿ ತಂದೆ ವೆಂಕಟೇಶ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತದ ನಂತರ ವಾಹನ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ’ ಎಂದೂ ತಿಳಿಸಿದರು.

ADVERTISEMENT

ಜಾತ್ರೆಗೆ ಬಂದಿದ್ದ ಕುಟುಂಬ: ‘ಬಾಲಕಿ ಪೋಷಕರು ಹಾಗೂ ಸಂಬಂಧಿಕರು, ಅರಣ್ಯದಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕಿವಿಯೋಲೆ, ಸರ ಹಾಗೂ ಇತರೆ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಜಾತ್ರೆಗಳಿಗೆ ಹೋಗಿ ಮಾರುತ್ತಾರೆ. ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಬಾಲಕಿ, ತಂದೆ– ತಾಯಿ ಸೇರಿ ಒಂಬತ್ತು ಮಂದಿ ಇತ್ತೀಚೆಗೆ ಯಲಹಂಕ ಬಳಿಯ ಹುಸ್ಕೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಬಂದಿದ್ದರು. ಅಲಂಕಾರಿಕ ವಸ್ತುಗಳನ್ನು ಮಾರಿದ್ದರು. ಜಾತ್ರೆ ಮುಗಿಸಿ ತಮ್ಮೂರಿಗೆ ಹೋಗಲೆಂದು ಸಿಟಿ ಮಾರ್ಕೆಟ್‌ ಬಳಿಯ ಬಸ್ ತಂಗುದಾಣಕ್ಕೆ ಸೋಮವಾರ ರಾತ್ರಿ ಬಂದಿದ್ದರು’ ಎಂದೂ ತಿಳಿಸಿದರು.

ಬಸ್‌ ಸಿಗದಿದ್ದರಿಂದ ಮಳಿಗೆ ಎದುರು ನಿದ್ದೆ: ‘ಬಾಲಕಿ ಪೋಷಕರು ಹಾಗೂ ಸಂಬಂಧಿಕರು, ನಿಲ್ದಾಣದಲ್ಲಿ ತಡರಾತ್ರಿಯವರೆಗೂ ಕಾದರೂ ಬಸ್‌ ಸಿಕ್ಕಿರಲಿಲ್ಲ. ನಿಲ್ದಾಣದಲ್ಲಿ ಮಲಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ನಿಲ್ದಾಣದಿಂದ ನಡೆದುಕೊಂಡು ಕೆ.ಆರ್. ಮಾರುಕಟ್ಟೆ ಪ್ರದೇಶಕ್ಕೆ ಬಂದಿದ್ದರು. ತೆಂಗಿನಕಾಯಿ ಮಂಡಿಯ ಮಳಿಗೆಗಳ ಎದುರು ಖುಲ್ಲಾ ಜಾಗವಿದ್ದು, ಅಲ್ಲಿಯೇ ಮಲಗಿದ್ದರು’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ನಸುಕಿನಲ್ಲಿ ಮಾರುಕಟ್ಟೆಗೆ ಬರುವ ವಾಹನಗಳು, ಮಳಿಗೆ ಎದುರು ಎಲ್ಲೆಂದರಲ್ಲಿ ಸಂಚರಿಸುತ್ತವೆ. ಕೆಲವರು, ಅಲ್ಲಿಯೇ ವಾಹನ ನಿಲುಗಡೆ ಮಾಡುತ್ತಾರೆ. ಹೂವು ತಂದಿದ್ದ ಬೊಲೆರೊ ವಾಹನದ ಚಾಲಕ, ಅವುಗಳನ್ನು ಮಾರುಕಟ್ಟೆಯಲ್ಲಿ ಇಳಿಸಿದ್ದರು. ವಾಪಸು ಹೋಗುವಾಗ ಮಳಿಗೆ ಎದುರು ನಿರ್ಲಕ್ಷ್ಯದಿಂದ ವೇಗವಾಗಿ ವಾಹನ ಚಲಾಯಿಸಿದ್ದರು. ಅದೇ ವೇಳೆ ವಾಹನದ ಮುಂಭಾಗದ ಎಡಬದಿ ಚಕ್ರ ಬಾಲಕಿ ಮೈ ಮೇಲೆ ಹರಿದಿತ್ತು’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.