ಗೆದ್ದಲಹಳ್ಳಿ ರೈಲ್ವೆ ಕೆಳಕಾಲುವೆ ಬಳಿಯ ರಾಜಕಾಲುವೆಯನ್ನು ಸಚಿವ ಕೆ.ಜೆ.ಜಾರ್ಜ್, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ಈಚೆಗೆ ಸುರಿದ ಭಾರಿ ಮಳೆಯಿಂದ ಜಲಾವೃತವಾಗಿದ್ದ ನಗರದ ಹಲವು ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಭೇಟಿ ನೀಡಿ, ಪರಿಶೀಲಿಸಿದರು. ‘ರಾಜಕಾಲುವೆ ಒತ್ತುವರಿ ತೆರವು ಮಾಡಿ, ತಡೆಗೋಡೆ–ಕೆಳಸೇತುವೆ ನಿರ್ಮಾಣಗಳಲ್ಲಿನ ನ್ಯೂನತೆಗಳನ್ನು ಶೀಘ್ರವೇ ಸರಿಪಡಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ಬೈರತಿ ಸುರೇಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರರಾವ್ ಅವರು ಇದ್ದ ತಂಡವು ಯಲಹಂಕ, ಮಹದೇವಪುರ ವಲಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ನಾಗವಾರ ಕೆರೆ ಬಳಿಯ ರಾಜಕಾಲುವೆ ಪ್ರದೇಶವನ್ನು ಪರಿಶೀಲನೆ ನಡೆಸುವಾಗ, ರಾಜಕಾಲುವೆ ಒತ್ತುವರಿಯಾಗಿದೆ ಎಂಬುದನ್ನು ಸ್ಥಳೀಯರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ‘ಮಾನ್ಯತಾ ಟೆಕ್ ಪಾರ್ಕ್, ಎಂಬೆಸಿ ಆಫೀಸ್ ಪಾರ್ಕ್ ಮತ್ತು ಇಬಿಸು ಟೆಕ್ ಪಾರ್ಕ್ ರಾಜಕಾಲುವೆ ಒತ್ತುವರಿ ಮಾಡಿವೆ. ಈ ಸಂಬಂಧ ಮೂರೂ ಕಂಪನಿಗಳಿಗೆ ಇದೇ ಮೇ 7ರಂದು ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿಗಳು ವಿವರಿಸಿದರು.
‘ಯಾವುದೇ ಪ್ರಭಾವಿ ಕಂಪನಿ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ’ ಎಂದು ಸಿದ್ದರಾಮಯ್ಯ ಅವರು ತಾಕೀತು ಮಾಡಿದರು. ಇದಾಗಿ ಕೆಲವೇ ಗಂಟೆಗಳಲ್ಲಿ ಮಾನ್ಯತಾ ಟೆಕ್ ಪಾರ್ಕ್ ಪತ್ರಿಕಾ ಪ್ರಕಟಣೆ ಹೊರಡಿಸಿ, ‘ರಾಜಕಾಲುವೆ ಪ್ರದೇಶದಲ್ಲಿ ಆಗಿರುವ ಸಮಸ್ಯೆಯನ್ನು ಸರಿಪಡಿಸುತ್ತೇವೆ. ನಮ್ಮದೇ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸುತ್ತೇವೆ’ ಎಂದಿತು.
ಗೆದ್ದಲಹಳ್ಳಿ ರೈಲ್ವೆ ಕೆಳಕಾಲುವೆ, ಸಾಯಿ ಬಡಾವಣೆ, ಪಣತ್ತೂರು ರೈಲ್ವೆ ಕೆಳಸೇತುವೆ, ರೇಷ್ಮೆ ಮಂಡಳಿ ಮತ್ತು ಗುರಪ್ಪನಪಾಳ್ಯ ಪ್ರದೇಶಗಳಿಗೆ ಭೇಟಿ ನೀಡಿದ ತಂಡವು ಪರಿಶೀಲನೆ ನಡೆಸಿತು. ಮಳೆ ನೀರಿನ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ವಿವರಿಸುತ್ತಿದ್ದ ಸಾಯಿ ಬಡಾವಣೆ ನಿವಾಸಿಗಳು, ಒಂದು ಹಂತದಲ್ಲಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಮುಖ್ಯಮಂತ್ರಿ ಸಮಾಧಾನ ಪಡಿಸಿದರು.
ರೈಲ್ವೆ ಕೆಳಕಾಲುವೆ ಅಗಲೀಕರಣಕ್ಕೆ ಒಪ್ಪಿಗೆ: ‘ವಡ್ಡರಪಾಳ್ಯ ಮತ್ತು ಗೆದ್ದಲಹಳ್ಳಿ ವ್ಯಾಪ್ತಿಯಲ್ಲಿ ಹಾದುಹೋಗುವ ರಾಜಕಾಲುವೆಯು 26 ಮೀಟರ್‌ನಷ್ಟು ಅಗಲವಿದೆ. ಆದರೆ ಗೆದ್ದಲಹಳ್ಳಿಯಲ್ಲಿ ರೈಲ್ವೆ ಮಾರ್ಗವನ್ನು ಹಾದು ಹೋಗುವಾಗ ಕಾಲುವೆಯ ಅಗಲ 8 ಮೀಟರ್‌ಗಳಿಗೆ ಕುಗ್ಗುತ್ತದೆ. ತೀವ್ರ ಮಳೆಯಾದ ಸಂದರ್ಭದಲ್ಲಿ ರೈಲ್ವೆ ಕೆಳಕಾಲುವೆಯಲ್ಲಿ (ರೈಲ್ವೆ ವೆಂಟ್) ನೀರು ಹರಿಯುವುದಿಲ್ಲ. ಪರಿಣಾಮವಾಗಿ ಮಳೆ ನೀರು ಹಿಮ್ಮುಖವಾಗಿ ಹರಿಯುತ್ತದೆ. ಈ ಕಾರಣದಿಂದಲೇ ಸುತ್ತಮುತ್ತಲ ಪ್ರದೇಶಗಳಿಗೆ ನೀರು ನುಗ್ಗುತ್ತದೆ’ ಎಂದು ಎಚ್‌ಬಿಆರ್ ಬಡಾವಣೆ, ವಡ್ಡರಪಾಳ್ಯ, ಗೆದ್ದಲಹಳ್ಳಿ ಮತ್ತು ಸಾಯಿ ಬಡಾವಣೆ ನಿವಾಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರಿತ್ತರು.
ಈ ಬಗ್ಗೆ ವಿವರಣೆ ನೀಡಿದ ಅಧಿಕಾರಿಗಳು, ‘ಕೆಳಕಾಲುವೆ ಅಗಲೀಕರಣಕ್ಕೆ ಅನುಮತಿ ನೀಡುವಂತೆ ಮಾರ್ಚ್ ಏಳರಂದೇ ನೈರುತ್ಯ ರೈಲ್ವೆಗೆ ಪತ್ರ ಬರೆಯಲಾಗಿತ್ತು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಈ ಕೆಳಕಾಲುವೆ ಕಾರಣಕ್ಕೇ ಈಚೆಗೆ ಹಲವು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿತ್ತು ಎಂಬುದನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಹೀಗಾಗಿ ಕಾಲುವೆ ಅಗಲೀಕರಣಕ್ಕೆ ಮಂಗಳವಾರ ಸಂಜೆ ಒಪ್ಪಿಗೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈ ಕಾಮಗಾರಿ ನಡೆಸಲಿದ್ದು, ₹13 ಕೋಟಿ ವೆಚ್ಚವಾಗುತ್ತದೆ. ಅದರಲ್ಲಿ ಈಗಾಗಲೇ ₹6 ಕೋಟಿ ಬಿಡುಗಡೆ ಮಾಡಿದ್ದು, ಕಾಮಗಾರಿ ಆರಂಭಿಸಲಾಗಿದೆ’ ಎಂದು ಸಿದ್ದರಾಮಯ್ಯ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಶಾಶ್ವತ ಪರಿಹಾರಕ್ಕೆ ಕ್ರಮ’
ಜಲಾವೃತ ಸಮಸ್ಯೆ ಎದುರಿಸಿದ್ದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ‘ಕಾವೇರಿ’ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮಳೆನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ನೆರೆಯಿಂದ ಹಾನಿಯಾದವರಿಗೆ ಪರಿಹಾರ ನೀಡಲಾಗುವುದು’ ಎಂದರು.
‘ನಗರದಲ್ಲಿನ 491 ಕಿ.ಮೀ.ನಷ್ಟು ರಾಜಕಾಲುವೆಯಲ್ಲಿ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. 125 ಕಿ.ಮೀ. ಕಾಲುವೆಯ ಕಾಮಗಾರಿ ನಡೆಯುತ್ತಿದೆ. ಇನ್ನೂ 173 ಕಿ.ಮೀ. ಉದ್ದದಷ್ಟು ಕಾಮಗಾರಿ ನಡೆಸಲು ವಿಶ್ವಬ್ಯಾಂಕ್‌ನಿಂದ ₹2000 ಕೋಟಿ ಸಾಲ ಪಡೆಯಲಾಗಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿವೆ’ ಎಂದರು.
‘ನಗರದಲ್ಲಿ 168 ತಗ್ಗು ಪ್ರದೇಶಗಳನ್ನು ಗುರುತಿಸಲಾಗಿದ್ದು ಅಂತಹ ಬಡಾವಣೆಗಳಲ್ಲಿ ಇನ್ನು ಮುಂದೆ ನೆಲಮಹಡಿ ನಿರ್ಮಿಸುವುದನ್ನು ನಿಷೇಧಿಸಿದ್ದೇವೆ. ರಾಜಕಾಲುವೆಗೆ ಕಸ ಸುರಿಯುತ್ತಿರುವುದರಿಂದಲೂ ಪ್ರವಾಹ ಸ್ಥಿತಿ ಎದುರಾಗುತ್ತಿದ್ದು ಅಂತಹವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ’ ಎಂದರು.
ಯಡಿಯೂರಪ್ಪ ಸರ್ಕಾರದಲ್ಲಿ ಆಗಿದ್ದು: ಲಿಂಬಾವಳಿ
ಮಹದೇವಪುರ ವ್ಯಾಪ್ತಿಯ ಪಣತ್ತೂರು ಗಾರ್ಡನ್ ರಸ್ತೆ ಅಗಲೀಕರಣ ಪಣತ್ತೂರು ರೈಲ್ವೆ ಕೆಳಸೇತುವೆ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾಹಿತಿ ನೀಡಿದರು.
‘ಇಲ್ಲಿ ರಸ್ತೆ ಅಗಲೀಕರಣ ಮಳೆನೀರಿನ ಕಾಲುವೆ ನಿರ್ಮಾಣ ಮಾಡದೆ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿಯೇ ಸಮಸ್ಯೆಯಾಗುತ್ತಿದೆ’ ಎಂದರು.
ಆಗ ಮಧ್ಯಪ್ರವೇಶಿಸಿದ ಸಚಿವ ಬೈರತಿ ಸುರೇಶ್ ‘ಹಿಂದಿನ ಸರ್ಕಾರದಲ್ಲಿ ಅದೆಲ್ಲಾ ಆಗಿದ್ದು ಎಂಬುದನ್ನೂ ಹೇಳಿ’ ಎಂದು ಆಗ್ರಹಿಸಿದರು. ಆಗ ಲಿಂಬಾವಳಿ ಅವರು ತುಸು ಗಟ್ಟಿಯಾಗಿ ‘ಹೌದು ಹಿಂದಿನ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಅನುಮತಿ ನೀಡಿದ್ದು. ಅದೂ ಶೋಭಾ ಡೆವಲಪರ್ಸ್‌ಗೆ ಅನುಕೂಲ ಮಾಡಿಕೊಡಲು ಹಾಗೆ ಮಾಡಿದರು’ ಎಂದು ಡಿ.ಕೆ.ಶಿವಕುಮಾರ್ ಅವರತ್ತ ನೋಡಿದರು.
‘350 ಮೀಟರ್ ಉದ್ದದಷ್ಟು ಮಳೆ ನೀರಿನ ಕಾಲುವೆ ನಿರ್ಮಿಸಬೇಕಿದೆ. ಅದಕ್ಕೆ ಟೆಂಡರ್ ಆಗಬೇಕು. ಅದು ಆದರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ ಇವರು ಕಾಮಗಾರಿಗೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ಬೈರತಿ ಸುರೇಶ್ ಅವರತ್ತ ಬೊಟ್ಟು ಮಾಡಿದರು. ಅವರಿಬ್ಬರನ್ನು ಸುಮ್ಮನಿರಿಸಿದ ಸಿದ್ದರಾಮಯ್ಯ ಅವರು ‘ಮಳೆ ನೀರಿನ ಕಾಲುವೆ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಿ. ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿ ವಿಳಂಬದಿಂದ ಸಮಸ್ಯೆಯಾಗುತ್ತಿದ್ದು ಅದನ್ನೂ 45 ದಿನಗಳ ಒಳಗೆ ಪೂರ್ಣಗೊಳಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿಯವರು ಮಾಡಿದ್ದೇನು: ಡಿಕೆಶಿ
‘ಮಳೆ ಅನಾಹುತಕ್ಕೆ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು? ಈಗ ಸುಮ್ಮನೆ ಟೀಕೆ ಮಾಡುವುದರಿಂದ ಉಪಯೋಗವಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‘ಅರವಿಂದ ಲಿಂಬಾವಳಿ ಅವರು ರಸ್ತೆ ಅಗಲೀಕರಣಕ್ಕೆ ಭೂಸ್ವಾಧೀನದ ಸಮಸ್ಯೆ ಇರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಆ ಬಗ್ಗೆ ವಿವರಣಾತ್ಮಕವಾದ ಮಾಹಿತಿ ನೀಡುವಂತೆ ಹೇಳಿದ್ದೇನೆ. ಅದು ದೊರೆತ ನಂತರ ಸಚಿವ ಸಂಪುಟ ಸಭೆಯಲ್ಲಿ ಇರಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.