ADVERTISEMENT

‘ಕ್ಲಬ್‌ ಹೌಸ್’ ಜನರ ಸೆಳೆದು ಬೆಟ್ಟಿಂಗ್ ದಂಧೆ

ಮಡಿವಾಳ ಪೊಲೀಸರ ಕಾರ್ಯಾಚರಣೆ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:28 IST
Last Updated 9 ಅಕ್ಟೋಬರ್ 2021, 16:28 IST

ಬೆಂಗಳೂರು: ಸಾಮಾಜಿಕ ಜಾಲತಾಣ ‘ಕ್ಲಬ್ ಹೌಸ್’ ಮೂಲಕ ಜನರನ್ನು ಸೆಳೆದು ಆನ್‌ಲೈನ್‌ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಜಾಲವನ್ನು ಮಡಿವಾಳ ಪೊಲೀಸರು ಪತ್ತೆ ಮಾಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಜೆ.ಪಿ.ನಗರದ 24ನೇ ಮುಖ್ಯರಸ್ತೆಯ ನಿವಾಸಿ ಬಾಲಚಂದ್ರನ್ (30), ಕಸ್ತೂರಬಾ ನಗರದ ರವಿಕುಮಾರ್ (28) ಹಾಗೂ ಹೊರಮಾವು ವಿ.ಜಿ. ಬಡಾವಣೆಯ ಪೆನ್ನಿ ಚೇತನ್ (28) ಬಂಧಿತರು. ಅವರಿಂದ ₹ 59,670 ನಗದು, ಹುಂಡೈ ಐ–20 ಕಾರು, ಬೈಕ್, ಮೂರು ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸಿ ಇತ್ತೀಚೆಗಷ್ಟೇ ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೊಸ ತಿದ್ದುಪಡಿ ಅನ್ವಯ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ್ತಷ್ಟು ಮಂದಿ ಕೃತ್ಯದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ’ ಎಂದೂ ತಿಳಿಸಿದರು.

ADVERTISEMENT

‘ಕ್ಲಬ್‌ ಹೌಸ್’ ಚರ್ಚೆ ಆಯೋಜನೆ: ‘ಪ್ರಮುಖ ಆರೋಪಿ ಬಾಲಚಂದ್ರನ್, ಅಡ್ಮಿನ್ ಆಗಿ ‘ಕ್ಲಬ್‌ ಹೌಸ್‌’ ಆ್ಯಪ್‌ನಲ್ಲಿ ಚರ್ಚೆಗಳನ್ನು ಆಯೋಜಿಸುತ್ತಿದ್ದ. ವಿಷಯವಾರು ಚರ್ಚೆಯಲ್ಲಿ ಹಲವರು ಭಾಗವಹಿಸುತ್ತಿದ್ದರು. ಪರಸ್ಪರ ಪರಿಚಯ ಮಾಡಿಕೊಳ್ಳುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದರು.

‘ಐಪಿಎಲ್ ಶುರುವಾಗಿದ್ದು, ಕ್ರಿಕೆಟ್ ಬೆಟ್ಟಿಂಗ್ ಆಡೋಣ’ ಎಂಬುದಾಗಿ ಆರೋಪಿ ಹೇಳುತ್ತಿದ್ದ. ‘ಕ್ಲಬ್‌ಹೌಸ್‌’ ಸದಸ್ಯರನ್ನು ಪ್ರಚೋದಿಸಿ ಬೆಟ್ಟಿಂಗ್‌ಗೆ ಹಣ ಕಟ್ಟಿಸಿಕೊಳ್ಳಲಾರಂಭಿಸಿದ್ದ’ ಎಂದೂ ಹೇಳಿದರು.

ಬೆಟ್ಟಿಂಗ್‌ಗೆ ಆ್ಯಪ್ ಬಳಕೆ; ‘ಕ್ರಿಕೆಟ್ ಪಂದ್ಯಗಳ ಸ್ಕೋರ್ ವಿವರ ತಿಳಿಯಲು ಹಾಗೂ ಬೆಟ್ಟಿಂಗ್ ಆಡಲು ಹಲವು ಆ್ಯಪ್‌ಗಳು ಲಭ್ಯವ ಇವೆ. ಇಂಥ ಆ್ಯಪ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಸುತ್ತಿದ್ದ ಆರೋಪಿಗಳು, ಅವುಗಳ ಮೂಲಕವೇ ಹಣ ಕಟ್ಟಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸ್ ಅಧಿಕಾರಿ ವಿವರಿಸಿದರು.

‘ಮಡಿವಾಳ ಠಾಣೆ ವ್ಯಾಪ್ತಿಯ ವಸತಿಗೃಹವೊಂದರ ಕೊಠಡಿಯಲ್ಲಿ ಇತ್ತೀಚೆಗೆ ಸೇರಿದ್ದ ಆರೋಪಿಗಳು, ಐಪಿಎಲ್ ಪಂದ್ಯಾವಳಿಯ ಕೊಲ್ಕತ್ತ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್‌ ನಡೆಸುತ್ತಿದ್ದರು. ಸೋಲು ಹಾಗೂ ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಇತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ದಾಳಿ ಮಾಡಿ ಆರೋಪಿಗಳನ್ನ ಬಂಧಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.