ADVERTISEMENT

ದೇವಾಂಗ ಸಮುದಾಯ ಭವನಕ್ಕೆ ₹4 ಕೋಟಿ ಅನುದಾನ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 9 ಮೇ 2022, 19:52 IST
Last Updated 9 ಮೇ 2022, 19:52 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮುದಾಯ ಭವನವನ್ನು ಉದ್ಘಾಟಿಸಿದರು. ಮದುರೆ ಪುರುಷೋತ್ತಮಾನಂದ ಸ್ವಾಮೀಜಿ, ಸಚಿವ ಬಿ.ಸಿ. ನಾಗೇಶ್‌, ದಯಾನಂದ ಪುರಿ ಸ್ವಾಮೀಜಿ, ಗಾಯತ್ರಿ ಪೀಠ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಸಿ.ತಿಮ್ಮಶೆಟ್ಟಿ, ಸಚಿವ ಡಾ.ಕೆ. ಸುಧಾಕರ್‌, ದೇವಾಂಗ ಸಂಘದ ರಾಜ್ಯ ಅಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ ಇದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮುದಾಯ ಭವನವನ್ನು ಉದ್ಘಾಟಿಸಿದರು. ಮದುರೆ ಪುರುಷೋತ್ತಮಾನಂದ ಸ್ವಾಮೀಜಿ, ಸಚಿವ ಬಿ.ಸಿ. ನಾಗೇಶ್‌, ದಯಾನಂದ ಪುರಿ ಸ್ವಾಮೀಜಿ, ಗಾಯತ್ರಿ ಪೀಠ ಟ್ರಸ್ಟ್‌ನ ಕಾರ್ಯದರ್ಶಿ ಕೆ.ಸಿ.ತಿಮ್ಮಶೆಟ್ಟಿ, ಸಚಿವ ಡಾ.ಕೆ. ಸುಧಾಕರ್‌, ದೇವಾಂಗ ಸಂಘದ ರಾಜ್ಯ ಅಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ ಇದ್ದಾರೆ.   

ನೆಲಮಂಗಲ: ‘ಆಧುನಿಕರಣದ ಮಧ್ಯದಲ್ಲಿಯೂ ದೇವಾಂಗ ಜನಾಂಗವು ನೇಕಾರಿಕೆಯನ್ನು ಮುಂದುವರಿಸುತ್ತಿದ್ದು, ಅಸಂಘಟಿತರಾದ ಸಮುದಾಯದೊಂದಿಗೆ ನಾವು ಇದ್ದೇವೆ. ಸಮುದಾಯ ಭವನದ ಕಟ್ಟಡಕ್ಕೆ ₹1 ಕೋಟಿ ಅನುದಾನ ನೀಡಿದ್ದು, ಇನ್ನೂ ₹4 ಕೋಟಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಾಲ್ಲೂಕಿನ ಕೆಂಪಲಿಂಗನಹಳ್ಳಿಯಲ್ಲಿರುವ ದೇವಾಂಗ ಶಾಖಾ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

‘ದೇವರ ದಾಸಿಮಯ್ಯ ಪೀಠಕ್ಕೆ ₹1ಕೋಟಿ ಅನುದಾನ ನೀಡಲಾಗುವುದು. ಪಿಯುಸಿಯಿಂದ ಸ್ನಾತಕೋತ್ತರದವರೆಗೆ ವಿದ್ಯಾರ್ಥಿವೇತನ ಯೋಜನೆಯನ್ನು ಜನಾಂಗಕ್ಕೆ ಜಾರಿಗೆ ತರಲಿದ್ದೇವೆ. ಈಗಾಗಲೇ ಕೃಷಿಕರ ಮಕ್ಕಳು ಈ ಸೌಲಭ್ಯ ಪಡೆಯುತ್ತಿದ್ದಾರೆ, ಮೀನುಗಾರರಿಗೂ ಇದನ್ನು ವಿಸ್ತರಿಸಲಾಗುವುದು’ ಎಂದರು.

ADVERTISEMENT

ಕಾಲೇಜು ಕಟ್ಟಡ ಉದ್ಘಾಟಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ದಯವೇ ಧರ್ಮದ ಮೂಲವಾಗಬೇಕು. ಸಮ ಸಮಾಜ ಸೃಷ್ಟಿಗೆ ಡಾ.ಅಂಬೇಡ್ಕರ್‌ ಅವಕಾಶ ಕಲ್ಪಿಸಿದ್ದು ಅಧಿಕಾರ ವಂಚಿತ ಸಮಾಜಕ್ಕೆ ನನ್ನ ಅವಧಿಯಲ್ಲಿ ಮಾನ್ಯತೆ ನೀಡಿದ್ದೆ. ಮೀಸಲಾತಿ ಇಲ್ಲದೆ ಸಮ ಸಮಾಜ ಸೃಷ್ಟಿ ಹೇಗೆ’ ಎಂದು ಪ್ರಶ್ನಿಸಿದರು.

ಕಚೇರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಶಂಕುಸ್ಥಾಪನೆ ನೆರವೇರಿಸಿ, ‘ದೇವಾಂಗ ಜನಾಂಗಕ್ಕೆ ರಾಜ್ಯದ 51 ಕ್ಷೇತ್ರಗಳಲ್ಲಿ ಶಾಸಕರನ್ನು ಆಯ್ಕೆ ಮಾಡುವ ಶಕ್ತಿ ಇದ್ದು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು’ ಎಂದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮದುರೆ ಪುರುಷೋತ್ತಮಾನಂದ ಸ್ವಾಮೀಜಿ, ರಾಣಿಬೆನ್ನೂರು ಪ್ರಭುಲಿಂಗ ಸ್ವಾಮೀಜಿ, ನೊಣವಿನಕೆರೆ ಕರಿವೃಷಭ ಸ್ವಾಮೀಜಿ, ಆರೋಗ್ಯ ಡಾ.ಕೆ. ಸಚಿವ ಸುಧಾಕರ್‌, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಶಾಸಕರಾದ ಸಿ.ಟಿ.ರವಿ, ವೆಂಕಟರಮಣಪ್ಪ, ಬಿಎಂಎಲ್‌ ಕಾಂತರಾಜು, ಮಸಾಲೆ ಜಯರಾಂ, ಮಾಜಿ ಶಾಸಕ ಎಂ.ವಿ.ನಾಗರಾಜು, ಲಕ್ಷ್ಮೀನಾರಾಯಣ, ದೇವಾಂಗ ರಾಷ್ಟ್ರೀಯ ಅಧ್ಯಕ್ಷ ಅರುಣ್‌ ವರೋಡೆ ಇದ್ದರು.

ಗಾಯತ್ರಿ ಪೀಠದ ಅಧ್ಯಕ್ಷ ಗಿರಿಯಪ್ಪ, ಕಾರ್ಯದರ್ಶಿ ಕೆ.ಸಿ.ತಿಮ್ಮಶೆಟ್ಟಿ, ಸಂಘದ ರಾಜ್ಯ ಅಧ್ಯಕ್ಷ ರಮೇಶ್‌, ಪ್ರಧಾನ ಕಾರ್ಯದರ್ಶಿ ರವೀಂದ್ರ ಕಲಬುರ್ಗಿ ಮತ್ತು ದಾನಿಗಳನ್ನು ಮುಖ್ಯಮಂತ್ರಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.