ADVERTISEMENT

‘ವಿಶ್ರಾಂತಿ’ ಮೊರೆ ಹೋದ ‘ಮೈತ್ರಿ’ ನಾಯಕರು

ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ದಿನಚರಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2019, 20:26 IST
Last Updated 23 ಏಪ್ರಿಲ್ 2019, 20:26 IST
ಕುಮಾರಸ್ವಾಮಿ
ಕುಮಾರಸ್ವಾಮಿ   

ಬೆಂಗಳೂರು: ಲೋಕಸಭೆ ಚುನಾವಣೆಯ ಬಿಡುವಿಲ್ಲದ ಪ್ರಚಾರದ ಬಳಿಕ ಉಡುಪಿ ಬಳಿಯ ಆಯುರ್ವೇದ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸೆಗೆ ತೆರಳಿದ್ದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಂಗಳವಾರ ನಗರಕ್ಕೆ ವಾಪಸ್ ಬಂದರು.

ಎರಡನೇ ಹಂತದ ಬಹಿರಂಗ ಪ್ರಚಾರ ಕೊನೆಗೊಂಡ ಭಾನುವಾರ (ಏ.21) ಅವರು ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆರಿಟೇಜ್‌ನಲ್ಲಿ ಪ್ರಕೃತಿ ಚಿಕಿತ್ಸೆಯ ಮೊರೆ ಹೋಗಿದ್ದರು.

‘ಆರೋಗ್ಯ ಸುಧಾರಿಸಿಕೊಳ್ಳಲು ಚಿಕಿತ್ಸೆ ಪಡೆಯಲು ಬಂದಿದ್ದೆ. ಆದರೆ, ಶ್ರೀಲಂಕಾದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಿಂದ ಮನಸ್ಸಿಗೆ ನೋವಾಗಿದೆ. ಆತ್ಮೀಯರ ಸಾವು ಕಾಡುತ್ತಿದೆ. ಹೀಗಾಗಿ, ಚಿಕಿತ್ಸೆ ಅರ್ಧಕ್ಕೆ ನಿಲ್ಲಿಸಿ ಮರಳುತ್ತಿದ್ದೇನೆ’ ಎಂದು ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಮುಖ್ಯಮಂತ್ರಿ ಹೇಳಿದರು.

ADVERTISEMENT

ಕಾಪುವಿನಿಂದ ಮಂಗಳೂರು ಮಾರ್ಗವಾಗಿ ಹೊರಟ ಮುಖ್ಯಮಂತ್ರಿ ಸಂಜೆ ಹೊತ್ತಿಗೆ ಬೆಂಗಳೂರು ತಲುಪಿದರು. ಮಾರ್ಗ ಮಧ್ಯೆ, ಶ್ರವಣಬೆಳಗೊಳ ಜೆಡಿಎಸ್‌ ಶಾಸಕ ಸಿ.ಎನ್. ಬಾಲಕೃಷ್ಣ ಅವರಚನ್ನರಾಯಪಟ್ಟಣದಲ್ಲಿರುವ ಮನೆಯಲ್ಲಿ ಮುದ್ದೆ ಸಾರು ಊಟ ಮಾಡಿದರು.

‘ಕಾವೇರಿ’ಯಲ್ಲಿ ವಿಶ್ರಾಂತಿ: ಚುನಾವಣೆ ಘೋಷಣೆಯಾದ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮಂಗಳವಾರ ಬೆಂಗಳೂರಿನ ‘ಕಾವೇರಿ’ ನಿವಾಸದಲ್ಲಿ ವಿಶ್ರಾಂತಿಗೆ ಶರಣಾದರು.

ಈ ಮಧ್ಯೆಯೂ, ತಮ್ಮನ್ನು ಭೇಟಿಯಾದ ಸಂಸದರಾದ ಆರ್ ಧ್ರುವನಾರಾಯಣ, ಬಿ.ಎನ್‌. ಚಂದ್ರಪ್ಪ ಮತ್ತು ಡಿ.ಕೆ. ಸುರೇಶ ಜೊತೆ ಮತದಾನ ಪ್ರಮಾಣ, ಫಲಿತಾಂಶ ನಿರೀಕ್ಷೆ ಬಗ್ಗೆ ಸಿದ್ದರಾಮಯ್ಯ ಲೋಕಾಭಿರಾಮವಾಗಿ ಚರ್ಚಿಸಿದರು.

ತುಮಕೂರು ಕ್ಷೇತ್ರದಲ್ಲಿ ಹಾಲಿ ಸಂಸದ ಮುದ್ದಹನುಮೇಗೌಡ ಅವರಿಗೆ ಪಕ್ಷ ಟಿಕೆಟ್‌ ನೀಡಿಲ್ಲ ಎಂದು ಪಕ್ಷದ ನಾಯಕರ
ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಮಧುಗಿರಿಯ ಕಾಂಗ್ರೆಸ್‌ ಮುಖಂಡ ಕೆ.ಎನ್‌. ರಾಜಣ್ಣ ಕೂಡಾ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿಚಾರ ವಿನಿಮಯ ನಡೆಸಿದರು.

ಬಿಎಸ್‌ವೈ ಶಿವಮೊಗ್ಗದಲ್ಲಿ: ಮಿಷನ್ 22 ಗುರಿ ಸಾಧನೆ ಮುಂದಿಟ್ಟು ರಾಜ್ಯದಾದ್ಯಂತ ದಣಿವರಿಯದೇ ಓಡಾಡಿದ ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮತದಾನಕ್ಕೆ ಮೊದಲ ಎರಡು ದಿನ ಪ್ರಚಾರವನ್ನು ಶಿವಮೊಗ್ಗದಲ್ಲೇ ನಡೆಸಿದರು.

ಚುನಾವಣೆ ಘೋಷಣೆಯಾಗುವ ಮುನ್ನವೇ ‘ವಿಜಯ ಸಂಕಲ್ಪ ಯಾತ್ರೆ’ ಹಮ್ಮಿಕೊಂಡಿದ್ದ ಅವರು, ಇಡೀ ರಾಜ್ಯ ಸುತ್ತಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಶಿಕಾರಿಪುರದಲ್ಲಿ ಮತದಾನ ಮಾಡಿದ ಬಳಿಕ ಮಂಗಳವಾರ ರಾತ್ರಿ 8ಗಂಟೆಯವರೆಗೂ ತಮ್ಮ ಗೃಹ ಕಚೇರಿಯಲ್ಲೇ ಕುಳಿತು, ಕಾರ್ಯಕರ್ತರು ಹಾಗೂ ಹಿತೈಷಿಗಳ ಜತೆ ಸಮಾಲೋಚನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.