ADVERTISEMENT

‘ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ಬದ್ಧ: ತುಷಾರ್‌ ಗಿರಿನಾಥ್‌

ವಿಸ್ತರಣೆ ಜೊತೆಗೆ ಅಂಡರ್‌ಪಾಸ್‌ ಮರುನಿರ್ಮಾಣ: ತುಷಾರ್‌ ಗಿರಿನಾಥ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 16:46 IST
Last Updated 30 ಜನವರಿ 2023, 16:46 IST

ಬೆಂಗಳೂರು: ವಾಹನ ದಟ್ಟಣೆ ನಿವಾರಣೆಗೆ ಸ್ಯಾಂಕಿ ರಸ್ತೆ ವಿಸ್ತರಣೆ ಜೊತೆಗೆ ಮೇಲ್ಸೇತುವೆ ನಿರ್ಮಿಸುವುದು ಅನಿವಾರ್ಯ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

‘ಸ್ಯಾಂಕಿ ರಸ್ತೆ ವಿಸ್ತರಣೆ ಬಗ್ಗೆ ನಾವು ನ್ಯಾಯಾಲಯದಲ್ಲೇ ಸ್ಪಷ್ಟಪಡಿಸಿದ್ದೇವೆ. ಇದೀಗ ಮೇಲ್ಸೇತುವೆ ಹಾಗೂ ಅಂಡರ್‌ ಪಾಸ್‌ ನಿರ್ಮಿಸಲು ತಾಂತ್ರಿಕವಾಗಿ ಯೋಜನೆ ಮಾಡಿದ್ದೇವೆ. ಇದು ಅತ್ಯಗತ್ಯವಾಗಿ ಬೇಕಿದೆ’ ಎಂದು ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

‘ಹಲವರು ಮೇಲ್ಸೇತುವೆ ಮಾಡಿ ಎನ್ನುತ್ತಿದ್ದಾರೆ. ಕೆಲವರು ಬೇಡ ಎನ್ನುತ್ತಿದ್ದಾರೆ. ತಾಂತ್ರಿಕವಾಗಿ ನಾವು ಮುಂದಡಿ ಇಟ್ಟಿದ್ದೇವೆ. ಕಾವೇರಿ ಜಂಕ್ಷನ್‌ ಅಂಡರ್‌ಪಾಸ್‌ ಮಾರ್ಪಡಿಸಲಾಗುತ್ತದೆ. ಅದರಂತೆ ನಾವು ಎರಡನ್ನೂ ಮಾಡಬೇಕಿದೆ. ಅದರಂತೆಯೇ ಕಾಮಗಾರಿ ಕೈಗೊಳ್ಳುತ್ತೇವೆ’ ಎಂದರು.

ADVERTISEMENT

‘ಪ್ರಜಾಪ್ರಭುತ್ವದಲ್ಲಿ ಬೇರೆ ಬೇರೆ ಅಭಿಪ್ರಾಯ ಇದ್ದೇ ಇರುತ್ತದೆ. ಬೆಂಗಳೂರು ಮೆಟ್ರೊಪಾಲಿಟನ್‌ ಭೂಸಾರಿಗೆ ಪ್ರಾಧಿಕಾರದವರೂ (ಬಿಎಂಎಲ್‌ಟಿಎ) ಈ ಮೇಲ್ಸೇತುವೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಅವರಿಗೆ ಎಲ್ಲ ರೀತಿಯ ಮಾಹಿತಿ ಒದಗಿಸಲಾಗುವುದು. ರಸ್ತೆ ವಿಸ್ತರಣೆ ಮಾತ್ರ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ತಾಂತ್ರಿಕವಾಗಿ ನಾವು ಮೇಲ್ಸೇತುವೆ, ಅಂಡರ್‌ಪಾಸ್‌ ನಿರ್ಮಾಣಕ್ಕೆ ಬದ್ಧವಾಗಿದ್ದೇವೆ’ ಎಂದರು.

ಬಿಲ್‌ ಪಾವತಿ ಸಮಸ್ಯೆ: ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರು ಜಲಮಂಡಳಿಗೆ ನೀರಿನ ಬಿಲ್‌ ಪಾವತಿಸದ್ದರಿಂದ ಸಂಪರ್ಕ ಕಡಿತಗೊಳಿಸಿದ್ದಾರೆ. ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಮಾಡಲಾಗಿದೆ. ಗುತ್ತಿಗೆದಾರರೇ ಇದೆಲ್ಲವನ್ನೂ ನಿರ್ವಹಿಸಬೇಕು ಎಂದು ತುಷಾರ್‌ ಗಿರಿನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.