ADVERTISEMENT

25 ವರ್ಷಗಳ ಹಿಂದಿನ ಕೋಮು ಗಲಭೆ ಪ್ರಕರಣ: ಆರೋಪಿಗೆ ಮಧ್ಯಂತರ ಜಾಮೀನು

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:33 IST
Last Updated 3 ಅಕ್ಟೋಬರ್ 2025, 14:33 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಎರಡೂವರೆ ದಶಕಗಳಿಗೂ ಹಿಂದೆ ಸುರತ್ಕಲ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆದಿದ್ದ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ ಬಂಧನಕ್ಕೆ ಒಳಗಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಹಳೆಯಂಗಡಿ ಮೂಲದ ಅನಿವಾಸಿ ಭಾರತೀಯ (ಸದ್ಯ ಮಸ್ಕತ್ ನಲ್ಲಿ ವಾಸ) ಚಂದ್ರಹಾಸ ಕೇಶವ ಶೆಟ್ಟಿ ಅವರಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಚಂದ್ರಹಾಸ ಕೇಶವ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ವಾದ ಆಲಿಸಿದ ನ್ಯಾಯಪೀಠ, "ಪ್ರಕರಣಕ್ಕೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳು ಲಭ್ಯವಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ಬಂಧನದಲ್ಲಿ ಇರಿಸುವುದು ಸೂಕ್ತವಲ್ಲ" ಎಂಬ ಅಭಿಪ್ರಾಯದೊಂದಿಗೆ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ADVERTISEMENT

"ಆರೋಪಿಯು ₹1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತ್ರಿ ನೀಡಬೇಕು ಮತ್ತು ವಿದೇಶಕ್ಕೆ ತೆರಳಬಾರದು" ಎಂಬುದೂ ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ. ಹೈಕೋರ್ಟ್ ವಕೀಲ ಸುಯೋಗ ಹೆರಳೆ ವಕಾಲತ್ತು ವಹಿಸಿದ್ದಾರೆ.

ಪ್ರಕರಣವೇನು?: ಸುರತ್ಕಲ್ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ 1998ರ ಡಿಸೆಂಬರ್ ನಲ್ಲಿ ಕೋಮು ಗಲಭೆ ನಡೆದಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನಲ್ಲಿ ಅರ್ಜಿದಾರರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು. ಎಫ್ಐಆರ್ ಹಾಗೂ ದೋಷಾರೋಪ ಪಟ್ಟಿಯಲ್ಲಿ, "ಆರೋಪಿ ತಲೆ ಮರೆಸಿಕೊಂಡಿದ್ದಾರೆ" ಎಂದು ನಮೂದಿಸಲಾಗಿತ್ತು.

ಚಂದ್ರಹಾಸ ಅವರು 1992ರಿಂದಲೂ ಕುಟುಂಬ ಸಮೇತ ಮಸ್ಕತ್ ನಲ್ಲಿ ನೆಲೆಸಿದ್ದು, ತಾಯಿಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಸ್ಕತ್ ನಿಂದ ತವರೂರಿಗೆ ಬರುವಾಗ ಮುಲ್ಕಿ ಪೊಲೀಸರು2025ರ ಆಗಸ್ಟ್ 28ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಿದ್ದರು.

ವಿಚಾರಣಾ ನ್ಯಾಯಾಲಯ ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.