ADVERTISEMENT

ಆರೋಗ್ಯ ತಪಾಸಣೆಗೆ ಬಾರದ ರೋಗಿಗಳು

ಪಾಲಿಕೆಗೆ ಸವಾಲಾಗಿದೆ ಸಾಂಕ್ರಾಮಿಕ ರೋಗ ನಿಯಂತ್ರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 19:51 IST
Last Updated 8 ಜುಲೈ 2019, 19:51 IST

ಬೆಂಗಳೂರು: ಸಾಂಕ್ರಾಮಿಕ ರೋಗದ ಲಕ್ಷಣ ಕಾಣಿಸಿಕೊಂಡಿರುವ ರೋಗಿಗಳು ವೈದ್ಯರ ಬಳಿ ಒಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಹೋದ ಬಳಿಕ ಮರಳಿ ತಪಾಸಣೆಗೆ ಬರುತ್ತಿಲ್ಲ. ಇದರಿಂದಾಗಿ ಸೋಂಕು ರೋಗ ನಿಯಂತ್ರಣದ ಸ್ಪಷ್ಟ ಚಿತ್ರಣ ಬಿಬಿಎಂಪಿಗೆ ಲಭಿಸುತ್ತಿಲ್ಲ.

ಸಾಂಕ್ರಾಮಿಕ ರೋಗದ ಲಕ್ಷಣ ಹೊಂದಿದ್ದ 34,885 ರೋಗಿಗಳು ವೈದ್ಯರಲ್ಲಿ ಬಂದು ಚಿಕಿತ್ಸೆ ಪಡೆದಿದ್ದರು. ಅವರು ಬಳಿಕ ಆರೋಗ್ಯ ತಪಾಸಣೆಗೆ ಮರಳಿಲ್ಲ ಎನ್ನುತ್ತಿದೆಬಿಬಿಎಂಪಿಯ ಸಾರ್ವಜನಿಕ ಆರೋಗ್ಯ ಮಾಹಿತಿ ಮತ್ತು ಸೋಂಕು ರೋಗ ನಿಯಂತ್ರಣ ಘಟಕದ 2019ರ ವರದಿ.

ಘಟಕದ ನೋಡಲ್‌ ಅಧಿಕಾರಿ ಡಾ.ವೆಂಕಟೇಶ, ‘ಆರೋಗ್ಯ ತಪಾಸಣೆಗೆ ಒಳಗಾದವರ ಪೈಕಿ, ಜ್ವರದ ಲಕ್ಷಣಗಳನ್ನು ಕೆಲವು ರೋಗಿಗಳು ಹೊಂದಿದ್ದರು. ಆದರೆ, ವೈದ್ಯಕೀಯ ವರದಿಯ ಜೊತೆಗೆ ಮತ್ತೆ ಅವರು ಮತ್ತೆ ಆರೋಗ್ಯ ತಪಾಸಣೆಗೆ ಬಂದಿಲ್ಲ’ ಎಂದರು.

ADVERTISEMENT

‘ಆಸ್ಪತ್ರೆಗೆ ಮರಳಿ ಬಾರದವರ ಪೈಕಿ ಕೆಲವರು ಗುಣಮುಖರಾಗಿರಬಹುದು ಅಥವಾ ಬೇರೆ ಆಸ್ಪತ್ರೆಗೆ ಭೇಟಿ ನೀಡಿರಬಹುದು. ಇಂತಹ ಪ್ರಕರಣಗಳ ಮಾಹಿತಿ ಸಿಗುವುದು ವಿರಳ’ ಎಂದರು.

‘ಬಹುತೇಕ ಸಾಂಕ್ರಾಮಿಕ ರೋಗಗಳು ಚಿಕಿತ್ಸೆಯಿಂದ ವಾಸಿಯಾಗುತ್ತವೆ. ಆದರೆ, ರೋಗಿಯಲ್ಲಿ ಎಚ್‌1ಎನ್‌1 ವೈರಸ್‌ ಸೋಂಕು ತಗುಲಿದ್ದರೆ ಮತ್ತು ಆ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದರೆ ಅದು ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ’ ಎಂದು ಆರೋಗ್ಯ ಇಲಾಖೆಯ ನಿರ್ದೇಶಕ ಡಾ. ಟಿ.ಎಸ್. ಪ್ರಭಾಕರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.