ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಮೇ 2023, 3:23 IST
Last Updated 28 ಮೇ 2023, 3:23 IST
   

ಬೆಂಗಳೂರು: ಗೋವಿಂದರಾಜನಗರ ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್‌ ಕಟ್ಟಡವೊಂದರ ಕೊಠಡಿಯಲ್ಲಿ ಅಭಿಷೇಕ್ (19) ಎಂಬುವವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಬೀದರ್ ಜಿಲ್ಲೆಯ ಅಭಿಷೇಕ್, ಬಿ.ಎಸ್ಸಿ ವ್ಯಾಸಂಗ ಮಾಡುತ್ತಿದ್ದರು. ಅದರ ಜೊತೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲೆಂದು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಮೈಕೊಲೇಔಟ್ ಬಳಿ ಇರುವ ಸಂಬಂಧಿಕರ ಮನೆಯಲ್ಲಿ ಕೆಲ ದಿನ ಅಭಿಷೇಕ್ ಉಳಿದುಕೊಂಡಿದ್ದರು. ಅಧ್ಯಯನಕ್ಕೆ ಅನುಕೂಲವಾಗಲೆಂದು ಕೆಲದಿನಗಳ ಹಿಂದೆಯಷ್ಟೇ ವಿಜಯನಗರ ಬಳಿಯ ಮಾರೇನಹಳ್ಳಿಯ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಸ್ಥಳಾಂತರವಾಗಿದ್ದರು. ನಿತ್ಯವೂ ತರಬೇತಿ ಸಂಸ್ಥೆ ಹಾಗೂ ಗ್ರಂಥಾಲಯಕ್ಕೆ ಹೋಗಿ ಬರುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

‘ಶನಿವಾರ ಬೆಳಿಗ್ಗೆ ಸ್ನೇಹಿತರ ಜೊತೆ ಉಪಾಹಾರ ತಿಂದಿದ್ದ ಅಭಿಷೇಕ್, ಕೊಠಡಿಗೆ ಹೋಗಿದ್ದರು. ಸ್ನೇಹಿತರು ತರಬೇತಿ ಸಂಸ್ಥೆಗಳಿಗೆ ತೆರಳಿದ್ದರು. ಕೊಠಡಿಯಲ್ಲಿ ಒಂಟಿಯಾಗಿದ್ದ ಅಭಿಷೇಕ್, ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ಹೊತ್ತಿನ ನಂತರ ಸ್ನೇಹಿತರು ಕೊಠಡಿಗೆ ಬಂದಾಗ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಹೇಳಿದರು.

‘ಎರಡು ದಿನಗಳಿಂದ ಅಭಿಷೇಕ್ ಮೊಬೈಲ್ ಬಳಸಿಲ್ಲ. ಆತ್ಮಹತ್ಯೆಗೆ ಕಾರಣವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ, ಪೋಷಕರಿಗೆ ಮಾಹಿತಿ ನೀಡಲಾಗಿದ್ದು, ಅವರು ನಗರಕ್ಕೆ ಬರುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.