ADVERTISEMENT

ಬೆಂಗಳೂರು | ಪ್ರಧಾನಿ ಮೋದಿ ದ್ವೇಷ ಭಾಷಣ ವಿರುದ್ಧದ ದೂರಿನ ವಿಚಾರಣೆ ಇದೇ 28ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:56 IST
Last Updated 25 ಮೇ 2024, 15:56 IST
   

ಬೆಂಗಳೂರು: ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ’ ಎಂಬ ಪ್ರಚೋದನಾಕಾರಿ ಮತ್ತು ದ್ವೇಷಪೂರಿತ ಚುನಾವಣಾ ಭಾಷಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್) ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.

ಈ ಸಂಬಂಧ ಹೆಬ್ಬಾಳದ ಜಿಯಾವುರ್ ರಹಮಾನ್ ನೊಮಾನಿ, 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಇದೇ 23ರಂದು ದೂರು ಸಲ್ಲಿಸಿದ್ದಾರೆ.

‘ಪ್ರಧಾನಿಯವರ ಭಾಷಣವು ಮುಸ್ಲಿಮರನ್ನು ನಿಂದಿಸುವಂತಿದೆ. ಈ ದೇಶದ ಸಂಪತ್ತನ್ನು ಲೂಟಿ ಹೊಡೆದ ನುಸುಳುಕೋರರ ಜೊತೆ ಅವರನ್ನು ಹೋಲಿಕೆ ಮಾಡುವಂತೆ ಪ್ರೇರೇಪಿಸುತ್ತದೆ. ಆದಕಾರಣ ದ್ವೇಷ ಹರಡಿದ, ಶಾಂತಿಭಂಗ ಉಂಟು ಮಾಡಿದ ಆರೋಪದಡಿ ಮೋದಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

ADVERTISEMENT

ವಿಚಾರಣೆ ಮೇ 28ಕ್ಕೆ ನಿಗದಿಯಾಗಿದೆ. ಫಿರ್ಯಾದುದಾರರ ಪರ ವಕೀಲ ಮುರ್ತಜಾ ಅಲಿ ಬೇಗ್ ವಕಾಲತ್ತು ವಹಿಸಿದ್ದಾರೆ.

ಪ್ರಕರಣವೇನು?:

‘ಮೋದಿಯವರು ರಾಜಸ್ಥಾನದ ಬಾಂಸ್ವಾಡದಲ್ಲಿ ಏಪ್ರಿಲ್ 21 ರಂದು ಚುನಾವಣಾ ಪ್ರಚಾರ ಭಾಷಣದ ವೇಳೆ ದ್ವೇಷ ಭಾಷಣದ ನುಡಿಗಳನ್ನಾಡಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 153ಎ, 153ಬಿ, 295ಎ, 503, 504, 505(2)ರ ಅಡಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಮೃತಹಳ್ಳಿ ಠಾಣಾ ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

‘ಮೋದಿಯವರ ವಿರುದ್ಧ ಏಪ್ರಿಲ್ 26ರಂದು ಅಮೃತಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ, ಅಮೃತಹಳ್ಳಿ ಪೊಲೀಸರು, ಇದು ಭಾರತೀಯ ಚುನಾವಣಾ ಆಯೋಗದ ವ್ಯಾಪ್ತಿಗೆ ಒಳಪಡುವುದರಿಂದ ಎಫ್ಐಆರ್ ದಾಖಲಿಸಲಾಗದು ಎಂದು ಹಿಂಬರಹ ನೀಡಿದ್ದರು. ನಂತರ ಏಪ್ರಿಲ್ 27ರಂದು ಇ-ಮೇಲ್ ಮೂಲಕ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ಅವರಿಂದಲೂ ಸೂಕ್ತ ಸ್ಪಂದನೆ ದೊರೆಯದ ಕಾರಣ ಈ ಖಾಸಗಿ ದೂರು ಸಲ್ಲಿಸಲಾಗುತ್ತಿದೆ’ ಎಂದು ದೂರುದಾರರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.