ADVERTISEMENT

ಕಾಂಗ್ರೆಸ್‌ ಮೈತ್ರಿಯೋಗ್ಯ ಪಕ್ಷವಲ್ಲ: ಕುಮಾರಸ್ವಾಮಿ

ಟ್ವಿಟರ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 18:31 IST
Last Updated 1 ಅಕ್ಟೋಬರ್ 2020, 18:31 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ಬೆಂಗಳೂರು: ಕಾಂಗ್ರೆಸ್‌ ಮೈತ್ರಿಗೆ ಯೋಗ್ಯವಾದ ಪಕ್ಷವಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಉಪ ಚುನಾವಣೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ಇಲ್ಲ ಎಂಬ ಕಾಂಗ್ರೆಸ್‌ ನಾಯಕರ ಹೇಳಿಕೆಗಳಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘2018ರ ಚುನಾವಣಾ ಫಲಿತಾಂಶದ ಬಳಿಕ ದೇವೇಗೌಡರ ಮನೆ ಬಾಗಿಲಿಗೆ ಕಾಂಗ್ರೆಸ್‌ ಬಂದಂತೆ ನಾವ್ಯಾರೂ ಕಾಂಗ್ರೆಸ್‌ ಬಾಗಿಲಿಗೆ ಹೋಗಿಲ್ಲ’ ಎಂದಿದ್ದಾರೆ.

‘ಮೈತ್ರಿ ಮಾಡಿಕೊಳ್ಳಲು ಯೋಗ್ಯತೆ ಇರುವ ಪಕ್ಷವಲ್ಲ. ರಾಜ್ಯದಲ್ಲಿ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಿದ, ರಾಜಸ್ಥಾನದಲ್ಲಿ ಬೆಂಬಲ ನೀಡಿದ್ದ ಬಿಎಸ್‌ಪಿ ಶಾಸಕರನ್ನೇ ಪಕ್ಷಕ್ಕೆ ಸೆಳೆದುಕೊಂಡ, ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ದಿನವೂ ಅಲುಗಾಡಿಸುತ್ತಿರುವ ಕಾಂಗ್ರೆಸ್‌ನ ವರ್ತನೆಯು, ಮೈತ್ರಿಗೆ ತಾನು ಯೋಗ್ಯವಲ್ಲ ಎಂಬುದರ ಸಂದೇಶ. ಅಷ್ಟಕ್ಕೂ ಕಾಂಗ್ರೆಸ್ ಮಿತ್ರ ಪಕ್ಷಗಳು ಬೇರೆಯೇ ಇವೆ’ ಎಂದು ಟೀಕಿಸಿದ್ದಾರೆ.

ADVERTISEMENT

ಮೈತ್ರಿ ಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜತೆ ಎಂದೂ ಮೈತ್ರಿ ಇಲ್ಲ. ಜೆಡಿಎಸ್‌ನ ಯಾರೂ ಕಾಂಗ್ರೆಸ್‌ನ ಎದುರು ಮೈತ್ರಿಯ ಪ್ರಸ್ತಾವವನ್ನು ಇಡುವುದು ಬೇಡ. ರಾಜ್ಯದಲ್ಲಿ ಮೈತ್ರಿ ಎಂದರೆ ಕಾಂಗ್ರೆಸ್-ಜೆಡಿಎಸ್ ಎಂಬ ಭಾವನೆಯೂ ಬೇಡ. ಹಾಗೆಯೇ, ಜೆಡಿಎಸ್ ಮತ್ತು ದೇವೇಗೌಡರ ಹೆಸರು ಬಳಸಿ ಆ ಪಕ್ಷದ 'ನಾಯಕ'ರು ಲಾಭ ಮಾಡಿಕೊಳ್ಳುವುದೂ ಬೇಡ‌ ಎಂದು ಹೇಳಿದ್ದಾರೆ.

ಖಂಡನೆ: ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಮತ್ತು ಹಲ್ಲೆಯಿಂದ ಮೃತಪಟ್ಟ ಯುವತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ತಡೆದು, ದೌರ್ಜನ್ಯ ನಡೆಸಿರುವುದನ್ನೂ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.