ADVERTISEMENT

ಮೇಕೆದಾಟು ಪಾದಯಾತ್ರೆ: ಬೆಂಗಳೂರಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 16:06 IST
Last Updated 1 ಮಾರ್ಚ್ 2022, 16:06 IST
ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿದ್ದ ಪಾದಯಾತ್ರೆಯಿಂದಾಗಿ ನಾಯಂಡಹಳ್ಳಿ ಬಳಿ ಮಂಗಳವಾರ ಸಂಚಾರ ದಟ್ಟಣೆ ಉಂಟಾಗಿತ್ತು– ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಪಕ್ಷವು ಹಮ್ಮಿಕೊಂಡಿದ್ದ ಪಾದಯಾತ್ರೆಯಿಂದಾಗಿ ನಾಯಂಡಹಳ್ಳಿ ಬಳಿ ಮಂಗಳವಾರ ಸಂಚಾರ ದಟ್ಟಣೆ ಉಂಟಾಗಿತ್ತು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ಮಂಗಳವಾರ ಹತ್ತಾರು ಸಾವಿರ ಜನರು ಪಾಲ್ಗೊಂಡಿದ್ದರಿಂದ ನಗರದ ಹಲವು ರಸ್ತೆಗಳಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಸೃಷ್ಟಿಯಾಯಿತು. ಪಾದಯಾತ್ರೆ ಸಾಗಿಬಂದ ಮಾರ್ಗಗಳಲ್ಲಿ ವಾಹನ ಸವಾರರು ರಸ್ತೆಯ ನಡುವೆಯೇ ಸಿಲುಕಿ ಪರದಾಡಿದರು.

ಬೆಳಿಗ್ಗೆ ಪಾದಯಾತ್ರೆ ಆರಂಭವಾಗುತ್ತಿದ್ದಂತೆಯೇ ಪಟ್ಟಣಗೆರೆಯಲ್ಲಿ ಸಾವಿರಾರು ಮಂದಿ ಮೈಸೂರು ರಸ್ತೆಗಿಳಿದರು. ಅಲ್ಲಿಂದ ದಾರಿಯುದ್ದಕ್ಕೂ ಸಹಸ್ರಾರು ಜನರು ಬಂದು ಸೇರುತ್ತಲೇ ಇದ್ದರು. ಮಧ್ಯಾಹ್ನದವರೆಗೂ ಪಾದಯಾತ್ರೆ ಇದೇ ಮಾರ್ಗದಲ್ಲಿ ಸಾಗಿತು. ಮಧ್ಯಾಹ್ನದ ಬಳಿಕ ಪಾದಯಾತ್ರೆ ನಾಯಂಡಹಳ್ಳಿ ಜಂಕ್ಷನ್‌ನಿಂದ ವರ್ತುಲ ರಸ್ತೆಯತ್ತ ತಿರುಗಿತು.

ಮೈಸೂರು ರಸ್ತೆಯಲ್ಲಿ ಒಂದು ಬದಿಯಲ್ಲಿ ಪಾದಯಾತ್ರೆ ಸಾಗಲು ಅವಕಾಶ ನೀಡಲಾಗಿತ್ತು. ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಲಾಗಿತ್ತು. ಆದರೆ, ಹಲವೆಡೆ ಜನರು ರಸ್ತೆಯ ಎರಡೂ ಬದಿಗಳನ್ನು ಆವರಿಸಿಕೊಂಡರು. ವಾಹನಗಳು ಮುಂದಕ್ಕೆ ಸಾಗಲು ಅವಕಾಶವಿಲ್ಲದಂತಾಯಿತು. ವಾಹನ ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದ ದೃಶ್ಯಗಳು ಕಂಡುಬಂದವು.

ADVERTISEMENT

ಪಟ್ಟಣಗೆರೆ, ನಾಯಂಡಹಳ್ಳಿ, ವಿಜಯನಗರ, ಗೋವಿಂದರಾಜನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನದವರೆಗೂ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದವು. ರಾಜರಾಜೇಶ್ವರಿನಗರ ಸೇರಿದಂತೆ ಹಲವು ಕಡೆಗಳಲ್ಲೂ ಸಂಚಾರ ಸಮಸ್ಯೆ ಉಂಟಾಗಿತ್ತು.

ಮಧ್ಯಾಹ್ನದ ಬಳಿಕ ವರ್ತುಲ ರಸ್ತೆಯಲ್ಲಿ ಪಾದಯಾತ್ರೆ ಸಾಗಿತು. ಆಗಲೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕಾಮಾಕ್ಯ ಜಂಕ್ಷನ್‌ನಿಂದ ಕದಿರೇನಹಳ್ಳಿ ಜಂಕ್ಷನ್‌, ಬನಶಂಕರಿ, ಜಯನಗರದವರೆಗೂ ವಾಹನದಟ್ಟಣೆ ವ್ಯಾಪಿಸಿತ್ತು. ಪದ್ಮನಾಭನಗರ, ಬಸವನಗುಡಿ ಸೇರಿದಂತೆ ಹಲವು ಪ್ರದೇಶಗಳಲ್ಲೂ ಈ ಸಮಸ್ಯೆ ಇತ್ತು.

ರಸ್ತೆ ಮಧ್ಯದಲ್ಲೇ ಸೆಲ್ಫಿ: ಪಾದಯಾತ್ರೆಗೆ ಬಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಪಕ್ಷದ ನಾಯಕರು ಕಂಡಾಗಲೆಲ್ಲ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಮುಗಿಬೀಳುತ್ತಿದ್ದರು. ರಸ್ತೆ ಮಧ್ಯದಲ್ಲೇ ಸೆಲ್ಫಿ ತೆಗೆದುಕೊಳ್ಳುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಕಾಂಗ್ರೆಸ್‌ ನಾಯಕರೂ ಕಿರಿಕಿರಿಗೆ ಒಳಗಾದರು. ಒಮ್ಮೆ ತಾಳ್ಮೆ ಕಳೆದುಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕಾರ್ಯಕರ್ತರ ಮೇಲೆ ಗರಂ ಆದರು.

ಶಿವಲಿಂಗಕ್ಕೆ ಪುಷ್ಪಾರ್ಚನೆ

ಶಿವರಾತ್ರಿ ಪ್ರಯುಕ್ತ ಜ್ಞಾನಭಾರತಿ ಮೆಟ್ರೊ ರೈಲು ನಿಲ್ದಾಣದ ಬಳಿ ಶಿವಲಿಂಗ ಇರಿಸಲಾಗಿತ್ತು. ಪಾದಯಾತ್ರೆಯಲ್ಲಿ ಬಂದ ಕಾರ್ಯಕರ್ತರು ಶಿವಲಿಂಗಕ್ಕೆ ಪುಷ್ಪಾರ್ಚನೆ ಮಾಡಿ ಮುಂದಕ್ಕೆ ಸಾಗಿದರು.

ಸಂಚಾರ ನಿಯಂತ್ರಿಸಿದ ಖಾದರ್‌

ಮಧ್ಯಾಹ್ನದ ವಿರಾಮದ ಬಳಿಕ ಪಾದಯಾತ್ರೆ ಆರಂಭವಾದಾಗ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಸೃಷ್ಟಿಯಾಯಿತು. ಆಗ ಸಮೀಪದಲ್ಲೇ ಇದ್ದ ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಯು.ಟಿ. ಖಾದರ್‌ ಸಂಚಾರ ವಿಭಾಗದ ಪೊಲೀಸರಂತೆ ರಸ್ತೆ ಮಧ್ಯದಲ್ಲೇ ನಿಂತು ವಾಹನಗಳ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.