ADVERTISEMENT

ಕಾರ್ಮಿಕ ಮಂಡಳಿ ಗುತ್ತಿಗೆ ನೌಕರ ಬಂಧನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2022, 20:12 IST
Last Updated 25 ನವೆಂಬರ್ 2022, 20:12 IST

ಬೆಂಗಳೂರು: ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾರ್ಥಿವೇತನ ವಂಚನೆ ಪ್ರಕರಣದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಗುತ್ತಿಗೆ ನೌಕರ ಮುಜಾಹಿದ್ ಪಾಷಾ ಎಂಬುವರನ್ನು ತುಮಕೂರು ಕ್ಯಾತ್ಸಂದ್ರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಾರ್ಮಿಕರ ಕಲ್ಯಾಣ ಮಂಡಳಿಯ ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ (ಎಸ್‌ಎಸ್‌ಪಿ) ವಿಭಾಗದಲ್ಲಿ ಈತ ಕೆಲಸ ಮಾಡುತ್ತಿದ್ದ.ತುಮಕೂರಿನ ಎಚ್‌ಎಂಎಸ್‌ಐಟಿ ಹಾಗೂ ಇತರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿದ್ಯಾರ್ಥಿವೇತನ ಮಂಜೂರು ಮಾಡಿಸಿಕೊಂಡು ವಂಚಿಸಲಾಗುತ್ತಿತ್ತು. ಈ ಸಂಬಂಧ ದೂರು ದಾಖಲಾಗಿತ್ತು.

‘100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಹೆಸರಿನಲ್ಲಿ ವಂಚಿಸಿರುವ ಬಗ್ಗೆ ಮಾಹಿತಿ ಇದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಂಡಳಿಯಿಂದ ₹ 3 ಸಾವಿರದಿಂದ ₹ 30 ಸಾವಿರ ವಿದ್ಯಾರ್ಥಿವೇತನ ನೀಡಲಿದೆ. ವಿದ್ಯಾರ್ಥಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಎಸ್‌ಎಸ್‌ಪಿ ಮೂಲಕ ಅರ್ಜಿಸಲ್ಲಿಸಲಾಗುತ್ತಿತ್ತು. ಎಸ್‌ಎಸ್‌ಪಿ ವಿಭಾಗದಲ್ಲಿದ್ದ ಪಾಷಾ, ಪರಿಶೀಲನೆ ನಡೆಸದೇ ಅರ್ಜಿಗಳನ್ನು ವಿಲೇವಾರಿ ಮಾಡುತ್ತಿದ್ದ. ವಿದ್ಯಾರ್ಥಿಗಳ ಖಾತೆಗಳಿಗೆ ಹಣ ಜಮೆ ಆದ ಬಳಿಕ, ಅದೇ ಹಣ ಕಮಿಷನ್ ರೂಪದಲ್ಲಿ ಆರೋಪಿ
ಗಳ ಕೈ ಸೇರುತ್ತಿತ್ತು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.