ADVERTISEMENT

ಭಾಷಣದಿಂದ ಮರೆಯಲಾರದ ಪ್ರಧಾನಿ ಆಗುವುದಿಲ್ಲ: ಸಿ.ಎನ್‌.ಆರ್‌.ರಾವ್‌

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2019, 20:22 IST
Last Updated 23 ಮಾರ್ಚ್ 2019, 20:22 IST
ಕಾರ್ಯಕ್ರಮದಲ್ಲಿ ಸಿ.ಎನ್.ಆರ್.ರಾವ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಇದ್ದರು.-ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಸಿ.ಎನ್.ಆರ್.ರಾವ್ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಇದ್ದರು.-ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಮರೆಯಲಾಗದ ಪ್ರಧಾನ ಮಂತ್ರಿ ಎನಿಸಿಕೊಳ್ಳಬೇಕಾದರೆ ಕೇವಲ ಭಾಷಣಗಳನ್ನು ಮಾಡಿದರೆ ಸಾಲದು’ ಎಂದು ಹಿರಿಯ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅಭಿಪ್ರಾಯಪಟ್ಟರು.

‘ನಮ್ಮ ದೇಶದ ಭವಿಷ್ಯ ಗ್ರಾಮೀಣ ಪ್ರದೇಶದ ಮಕ್ಕಳ ಕೈಯಲ್ಲಿದೆ. ಅವರ ಕಲಿಕೆ ಮತ್ತು ಪ್ರತಿಭೆಗೆ ಆದ್ಯತೆ ನೀಡುವ ಯೋಜನೆ ರೂಪಿಸಿದರೆ, ಅಂತಹ ಪ್ರಧಾನಿಯನ್ನು ಯಾರು, ಎಂದಿಗೂ ಮರೆಯುವುದಿಲ್ಲ’ ಎಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಪ್ರಧಾನಿ ರಾಜೀವ್‌ ಗಾಂಧಿ ಅವರಿಗೆ ನಾನು ವೈಜ್ಞಾನಿಕ ಸಲಹೆಗಾರನಾಗಿದ್ದೆ. ಅವರ ಅವಧಿಯಲ್ಲಿ ಗ್ರಾಮೀಣ ಮಕ್ಕಳಿಗಾಗಿ 525 ಜವಾಹರ ನವೋದಯ ಶಾಲೆಗಳನ್ನು ಆರಂಭಿಸಿದೆವು. ಆ ಶಾಲೆಗಳಲ್ಲಿ ಸಾವಿರಾರು ಮಕ್ಕಳು ಓದಿ ಭವಿಷ್ಯ ರೂಪಿಸಿಕೊಂಡಿದ್ದಾರೆ’ ಎಂದು ಸ್ಮರಿಸಿದರು.

‘ಚೀನಾದ ಮಕ್ಕಳಿಗಿಂತ ನಮ್ಮ ದೇಶದ ಮಕ್ಕಳಲ್ಲಿ ರಾಷ್ಟ್ರೀಯ ಭಾವನೆ ಕಡಿಮೆ. ಆ ದೇಶದಲ್ಲಿ ಶಿಕ್ಷಣ ಮತ್ತು ವಿಜ್ಞಾನಕ್ಕೆ ಆಡಳಿತಗಾರರು ಆದ್ಯತೆ ನೀಡುತ್ತಾರೆ. ನಮ್ಮ ರಾಜಕೀಯ ಮುಖಂಡರು ಇಂಥವುಗಳನ್ನು ಚುನಾವಣಾ ವಿಷಯವಾಗಿಸುವುದಿಲ್ಲ’ ಎಂದರು.

‘ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ ಲಿ(ಜಿಡಿಪಿ) ಶೇ 3.6ರಷ್ಟು ಶಿಕ್ಷಣಕ್ಕೆ, ಶೇ 0.9ರಷ್ಟನ್ನು ಮಾತ್ರ ವಿಜ್ಞಾನ ಕ್ಷೇತ್ರಕ್ಕೆ ಕೊಡುತ್ತಾರೆ. ಇದು ಬಹಳ ಕಡಿಮೆ. ಚೀನಾ ಜಿಡಿಪಿಯ ಶೇ 6ರಷ್ಟು ಪಾಲನ್ನು ಶಿಕ್ಷಣಕ್ಕೆ ಮೀಸಲಿಡುತ್ತದೆ’ ಎಂದು ಹೇಳಿದರು.

‘ಕಾಲೇಜು ದಿನಗಳಲ್ಲಿ ಬಹಳಷ್ಟು ಆಪ್ತರು ಐಎಎಸ್‌ ಅಧಿಕಾರಿಯಾಗುವಂತೆ ಸಲಹೆ ನೀಡಿದ್ದರು. ಐಎಎಸ್‌ ಹುದ್ದೆ ನನಗೆ ಗುಲಾಮಗಿರಿ ತರಹ ಕಾಣುತ್ತದೆ. ವಿಜ್ಞಾನದ ಕೆಲಸವೇ ನನಗೆ ಇಷ್ಟ. ಹಾಗಾಗಿ 57 ವರ್ಷಗಳಿಂದ ವಿಜ್ಞಾನ ಸೇವೆ ಮಾಡುತ್ತಿದ್ದೇನೆ’ ಎಂದರು.

‘ನಂಬಿಕೆ, ಮೂಢನಂಬಿಕೆ ಬೇರೆ’

‘ನಂಬಿಕೆ ಮತ್ತು ಮೂಢನಂಬಿಕೆಯಲ್ಲಿ ವ್ಯತ್ಯಾಸವಿದೆ. ನಾನು ನಂಬಿಕೆಯಲ್ಲಿ ವಿಶ್ವಾಸ ಇರಿಸಿಕೊಂಡಿದ್ದೇನೆ’ ಎಂದು ಸಿ.ಎನ್‌.ಆರ್‌.ರಾವ್‌ ಹೇಳಿದರು.

‘ಈ ಜ್ಯೋತಿಷ, ಜಾತಕ, ರಾಹು–ಕೇತು, ಇಂತಹ ದಿನ ಉಪವಾಸ ಮಾಡಬೇಕು ಎಂಬುದರಲ್ಲಿ ನಂಬಿಕೆ ಇಟ್ಟುಕೊಳ್ಳುವ ಹುಚ್ಚು ನನಗಿಲ್ಲ. ನನ್ನ ಮದುವೆ ನಿರ್ಣಯವಾಗುವಾಗ ಪತ್ನಿ ಕಡೆಯವರು ಜಾತಕ ಕೇಳಿದ್ದರು. ನನಗೆ ಅಂತಹದರಲ್ಲಿ ನಂಬಿಕೆ ಇಲ್ಲ ಎಂದು ಮುಕ್ತವಾಗಿ ಹೇಳಿಬಿಟ್ಟಿದ್ದೆ’ ಎಂದು ನೆನಪಿಸಿಕೊಂಡರು.

‘ಮೊಮ್ಮಕ್ಕಳೊಂದಿಗೆ 2004ರಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದೆ. ಆಗ ಸುನಾಮಿ ಬಂದಿತ್ತು. ನಾವು ಹೊಟೇಲ್‌ನ ಮೂರನೆ ಮಹಡಿಯಲ್ಲಿ ವಾಸ್ತವ್ಯ ಹೂಡಿದ್ದೆವು. ನೀರು ಎರಡನೇ ಮಹಡಿಯನ್ನು ಮುಳುಗಿಸಿತ್ತು. ಮನೆ ಸಾಮಗ್ರಿಗಳೆಲ್ಲ ನೀರಿನಲ್ಲಿ ತೇಲಾಡುತ್ತಿದ್ದವು. ಅಲ್ಲಿಂದ ಬದುಕಿ ಬಂದದ್ದೆ ಒಂದು ರೋಚಕ ಅನುಭವ’ ಎಂದು ಘಟನೆಯೊಂದನ್ನು ಮೆಲುಕು ಹಾಕಿದರು.

***

ನೀರಿನಲ್ಲಿರುವ ಜಲಜನಕವನ್ನು ಸೂರ್ಯನ ಶಾಖ ಬಳಸಿ ಬೇರ್ಪಡಿಸುವ ಸಂಶೋಧನೆಯಲ್ಲಿ ತೊಡಗಿದ್ದೇನೆ. ಅದು ಯಶಸ್ವಿಯಾದರೆ, ಜಲಜನಕವನ್ನು ಇಂಧನವಾಗಿ ಬಳಸಬಹುದು.

ಸಿ.ಎನ್‌.ಆರ್‌.ರಾವ್‌, ಹಿರಿಯ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.