ADVERTISEMENT

ತಾಯಿಗೆ ಅನಾರೋಗ್ಯ ಕಾರಣಕ್ಕೆ ಪೆರೋಲ್ ಮೇಲೆ ಹೊರ ಬಂದು ಪರಾರಿಯಾಗಿದ್ದ ಅಪರಾಧಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:54 IST
Last Updated 20 ಜೂನ್ 2025, 15:54 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ತಾಯಿಯ ಅನಾರೋಗ್ಯದ ಕಾರಣಕ್ಕೆ ಪೆರೋಲ್ ರಜೆ ಪಡೆದು ಅವಧಿ ಮುಗಿದ ಬಳಿಕ ಜೈಲಿಗೆ ವಾಪಸಾಗದೇ ತಲೆಮರೆಸಿಕೊಂಡಿದ್ದ ಕೈದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಇದ್ರೀಸ್ (30) ಬಂಧಿತ ಕೈದಿ. ಬೊಮ್ಮನಹಳ್ಳಿ ಸಿಂಗಸಂದ್ರ ನಿವಾಸಿಯಾಗಿರುವ ಅಪರಾಧಿ, ತನ್ನ ತಾಯಿಗೆ ಹುಷಾರಿಲ್ಲ ಎಂಬ ಕಾರಣ ನೀಡಿ ಏಪ್ರಿಲ್ 18ರಿಂದ ಮೇ 17ರವರೆಗೆ ಪೆರೋಲ್ ರಜೆ ಪಡೆದು ಹೊರಬಂದಿದ್ದ. ರಜೆ ಅವಧಿ ಮುಗಿದ ಬಳಿಕ ಜೈಲಿಗೆ ಮರಳದೆ ತಲೆಮರೆಸಿಕೊಂಡಿದ್ದ.

ADVERTISEMENT

ಈ ಬಗ್ಗೆ ಕೇಂದ್ರ ಕಾರಾಗೃಹ ಅಧೀಕ್ಷಕ ಇಮಾಮ್ ಸಾಬ್ ಮ್ಯಾಗೇರಿ ಅವರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಅಪರಾಧಿಯನ್ನು ತಮಿಳುನಾಡಿನ ಕೃಷ್ಣಗಿರಿಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಕೃಷ್ಣಗಿರಿ ಜಿಲ್ಲೆಯ ಇದ್ರೀಸ್ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅಪರಾಧ ಕೃತ್ಯ ಸಾಬೀತಾಗಿದ್ದರಿಂದ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ ಪ್ರತ್ಯೇಕ ಐದು ಪ್ರಕರಣಗಳಲ್ಲಿ ಒಟ್ಟು ₹40 ಲಕ್ಷ ದಂಡ ವಿಧಿಸಿತ್ತು. ಶಿಕ್ಷಾ ಅವಧಿ ಪೂರ್ಣಗೊಂಡರೂ ದಂಡ ಪಾವತಿಸದ ಕಾರಣ ಜೈಲಿನಲ್ಲಿ ಉಳಿದುಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಪೆರೋಲ್ ರಜೆ ಮುಗಿದ ಬಳಿಕ ಜೈಲಿಗೆ ಮರಳದೆ ಅ‍ಪರಾಧಿ ರೈಲು ಮೂಲಕ ಮುಂಬೈಗೆ ಪರಾರಿಯಾಗಿದ್ದ. ಏಜೆನ್ಸಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ. ಕೆಲ ದಿನಗಳ ಬಳಿಕ ಉದ್ಯೋಗ ತೊರೆದು, ಚೆನ್ನೈಗೆ ತೆರಳಿದ್ದ. ಬಂಧನ ಭೀತಿಯಿಂದ ಚೆನ್ನೈಯಿಂದ ಪತ್ನಿಯೊಂದಿಗೆ ಕೃಷ್ಣಗಿರಿಯಲ್ಲಿ ಬಂದು ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿಂದ ಅನ್ಯ ರಾಜ್ಯಕ್ಕೆ ಬಸ್‌ನಲ್ಲಿ ತೆರಳುವ ವೇಳೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಇದ್ರೀಸ್ ವಿರುದ್ಧ ಆರು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಪ್ರಕಟವಾಗಿದೆ. ಇನ್ನೂ ಐದು ಪ್ರಕರಣಗಳು ವಿಚಾರಣೆ ಹಂತದಲ್ಲಿವೆ’ ಎಂದು ಪೊಲೀಸರು ಹೇಳಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.