ADVERTISEMENT

ಉಸಿರಾಟ ಸಮಸ್ಯೆ: ರಸ್ತೆ ಬದಿ ಬಿದ್ದದ್ದ ವ್ಯಕ್ತಿ ಸಾವು

ಕೋವಿಡ್‌ ಹೆಚ್ಚಳ: ಕಂಗೆಟ್ಟ ರೋಗಿಗಳ ಕರುಣಾಜನಕ ಕತೆಗಳು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 19:23 IST
Last Updated 20 ಏಪ್ರಿಲ್ 2021, 19:23 IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೋವಿಡ್‌ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಉಸಿರಾಟದ ತೊಂದರೆಯಿಂದ ವ್ಯಕ್ತಿಯೊಬ್ಬರ ಸಾವು, ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದ ಬಗ್ಗೆ ವಿಡಿಯೊ ಮಾಡಿದ್ದ ಯುವಕ ಸಾವು, ಅದಲು–ಬದಲು ಶವ ನೀಡಿದ ಆಸ್ಪತ್ರೆ ಸಿಬ್ಬಂದಿ, ಚಿಕಿತ್ಸೆಗಾಗಿ ತಪ್ಪದ ಅಲೆದಾಟ...

ಇವು ಬೆಂಗಳೂರಿನಲ್ಲಿ ಕೋವಿಡ್‌ ಸೃಷ್ಟಿಸಿರುವ ಅವಾಂತರದ ಕೆಲ ತುಣುಕುಗಳು. ಕೋವಿಡ್ ಸೋಂಕಿತರ ನೋವು ಒಂದೇ ಕಡೆಯಾದರೆ, ಕೋವಿಡೇತರ ರೋಗಿಗಳಿಗೂ ಸಕಾಲಕ್ಕೆ ಚಿಕಿತ್ಸೆ ಸಿಗುತ್ತಿಲ್ಲ.

ಕಮಲಾನಗರದ ಮಾರುಕಟ್ಟೆ ಬಳಿ ಉಸಿರಾಟದ ತೊಂದರೆಯಿಂದ ನರಳುತ್ತಾ ಬಿದ್ದದ್ದ 40 ವರ್ಷದ ವ್ಯಕ್ತಿಯೊಬ್ಬರನ್ನು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನರಳುತ್ತಾ ರಸ್ತೆ ಬದಿ ಬಿದ್ದಿದ್ದರೂ ಕೋವಿಡ್ ಭಯದಿಂದ ಅವರಿಗೆ ತುರ್ತು ಆರೈಕೆ ಮಾಡಲು ಜನ ಮುಂದೆ ಬರಲಿಲ್ಲ.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಬಿಬಿಎಂಪಿಯ ಮಾಜಿ ಸದಸ್ಯ ಎಂ. ಶಿವರಾಜು ಅವರು ಸ್ಥಳಕ್ಕೆ ಆಂಬ್ಯುಲೆನ್ಸ್ ಕರೆಸಿ ಮಲ್ಲೇಶ್ವರದ ಕೆ.ಸಿ. ಜನರಲ್ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ಸಿಗದೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೂ ಚಿಕಿತ್ಸೆ ಸಿಗದೆ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ವಿಳಂಬ ಆಗಿದ್ದರಿಂದ ಅವರು ಮೃತಪಟ್ಟರು ಎಂದು ಶಿವರಾಜು ತಿಳಿಸಿದರು.

ಮೈಸೂರು ರಸ್ತೆ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿತ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು. ಅವರಿಬ್ಬರ ಹೆಸರು ಒಂದೇ ಆಗಿತ್ತು. ಆಸ್ಪತ್ರೆ ಸಿಬ್ಬಂದಿ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಸೋಮವಾರ ಅದಲು–ಬದಲಾಗಿ ನೀಡಿದ್ದರು. ಇದರಿಂದ ಅವಾಂತರ ಸೃಷ್ಟಿಯಾಗಿತ್ತು. ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿಬ್ಬಂದಿ ಕ್ಷಮೆ ಯಾಚಿಸಿದರು.

ಸಾವಿಗೂ ಮುನ್ನ ವಿಡಿಯೊ ಮಾಡಿದ್ದ ಯುವಕ

ಕೋವಿಡ್ ಸೋಂಕಿತ ಯುವಕ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ಅವ್ಯವಸ್ಥೆ ಮತ್ತು ಚಿಕಿತ್ಸೆ ನೀಡದ ಕಾರಣ ಮೈಸೂರು ರಸ್ತೆ ಬಳಿಯ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೂ ಇಬ್ಬರು ಮೃತಪಟ್ಟಿದ್ದನ್ನು ಕಂಡು ಆಘಾತಕ್ಕೆ ಒಳಗಾಗಿ ವಿಡಿಯೊ ಒಂದನ್ನು ಮಾಡಿ ಬಿಡುಗಡೆ ಮಾಡಿದ್ದರು.

ಅದಕ್ಕೂ ಮುನ್ನ ತಮ್ಮ ಕುಟುಂಬ ಸದಸ್ಯರ ಜೊತೆಯೂ ಮಾತನಾಡಿ ಆತಂಕ ವ್ಯಕ್ತಪಡಿಸಿದ್ದರು. ‘ಚಿಕಿತ್ಸೆ ನೀಡಲು ಯಾರೂ ವಾರ್ಡ್‌ಗೆ ಬರುವುದೇ ಇಲ್ಲ. ಕುಡಿಯಲು ನೀರು ಕೊಡುವವರೂ ಇಲ್ಲ. ಮನೆಗೆ ಬರುತ್ತೇನೆ ಕರೆದುಕೊಂಡು ಹೋಗಿ’ ಎಂದು ಬೇಡಿಕೊಂಡಿದ್ದರು. ಆದರೆ, ಮಂಗಳವಾರ ಅವರು ಮೃತಪಟ್ಟರು. ಬಾಳಿ ಬದುಕಬೇಕಿದ್ದ ಮಗನ ಸಾವು ಕುಟುಂಬ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

‘ಗಂಭೀರ ಪರಿಸ್ಥಿತಿ ಹೊರತುಪಡಿಸಿದರೆ ನಿಗದಿತ ಸಮಯದಲ್ಲಿ ಮಾತ್ರ ಊಟ ಹಾಗೂ ಔಷಧ ನೀಡಲು ವೈದ್ಯಕೀಯ ಸಿಬ್ಬಂದಿ ವಾರ್ಡ್‌ಗಳಿಗೆ ತೆರಳುತ್ತಾರೆ. ನೀರನ್ನು ಇಟ್ಟಿರುವ ಸ್ಥಳಕ್ಕೇ ಹೋಗಿ ಸೋಂಕಿತರು ನೀರು ಕುಡಿಯಬೇಕು. ಕೋವಿಡ್‌ ಚಿಕಿತ್ಸೆಯಲ್ಲಿ ಇದು ಸಹಜ ಪ್ರಕ್ರಿಯೆ. ನೀರು ವಾರ್ಡ್ ಹೊರಗಡೆ ಇರಿಸಲಾಗಿತ್ತು. ಪಕ್ಕದ ಬೆಡ್‌ನಲ್ಲಿದ್ದ ವ್ಯಕ್ತಿಗಳ ಸಾವಿನಿಂದ ಗಾಬರಿಗೆ ಒಳಗಾಗಿದ್ದ ಸೋಂಕಿತ ನೀರಿರುವುದನ್ನು ಗಮನಿಸದೆ ಸಹೋದರನಿಗೆ ಕರೆ ಮಾಡಿದ್ದಾರೆ. ಆಸ್ಪತ್ರೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿರಲಿಲ್ಲ. ಇದರಿಂದ ಗೊಂದಲ ಉಂಟಾಗಿದೆ. ಸಾವು ಸಂಭವಿಸಿರುವುದು ನಿರ್ಲಕ್ಷ್ಯದಿಂದಲ್ಲ’ ಎಂದು ರಾಜರಾಜೇಶ್ವರಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಪ್ರವೀಣ್ ಕುಮಾರ್ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.