ADVERTISEMENT

ನಿವೃತ್ತ ನೌಕರನಿಗೆ 4 ವರ್ಷ ಜೈಲು ಶಿಕ್ಷೆ

ನಕಲಿ ದಾಖಲೆ ಸೃಷ್ಟಿಸಿ ₹ 6.76 ಲಕ್ಷ ಸಾಲ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 19:54 IST
Last Updated 5 ಜುಲೈ 2019, 19:54 IST

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ‘ಬ್ಯಾಂಕ್ ಆಫ್‌ ಬರೋಡಾ’ದಿಂದ ಸಾಲ ಪಡೆದು ವಂಚಿಸಿದ್ದ ಕೇಂದ್ರ ಸರ್ಕಾರದ ನಿವೃತ್ತ ನೌಕರವಿ. ನಾಗರಾಜ ಅವರಿಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ 8ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.

‘ನಕಲಿ ವೇತನ ಪ್ರಮಾಣ ಪತ್ರ ಕೊಟ್ಟು ₹ 6.76 ಲಕ್ಷ ಸಾಲ ಪಡೆದಿದ್ದ ನಾಗರಾಜ್, ಮರುಪಾವತಿ ಮಾಡದೇ ವಂಚಿಸಿದ್ದಾರೆ’ ಎಂದು ಆರೋಪಿಸಿಬ್ಯಾಂಕ್‌ನ ಎಂ.ಜಿ.ರಸ್ತೆ ಶಾಖೆಯ ವ್ಯವಸ್ಥಾಪಕ ಎಸ್‌.ಡಿ.ಶರ್ಮಾ 2008ರ ಮೇ 1ರಂದು ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ್ದ ಅಂದಿನ ಸಬ್‌ ಇನ್‌ಸ್ಪೆಕ್ಟರ್ ಸಿ.ವಿ.ದೀಪಕ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ 8ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಮಹೇಶ್‌ಬಾಬು, ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ₹ 20 ಸಾವಿರ ದಂಡವನ್ನೂ ವಿಧಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಜಿ.ಎನ್. ಅರುಣ್ ವಾದಿಸಿದ್ದರು.

ADVERTISEMENT

ನಕಲಿ ವೇತನ ಪತ್ರ: ‘ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದ ನಾಗರಾಜ್, 2008ರಲ್ಲಿ ಬೆಂಗಳೂರಿನ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದರು’ ಎಂದು ಪೊಲೀಸರು ಹೇಳಿದರು.

‘ಬ್ಯಾಂಕ್‌ಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಅವರು ತಾವು ಕೆಲಸದಲ್ಲಿ ಇರುವುದಾಗಿ ಹೇಳಿ ನಕಲಿ ವೇತನ ಪ್ರಮಾಣ ಪತ್ರವನ್ನೂ ನೀಡಿದ್ದರು. ಅದು ನಿಜವೆಂದು ತಿಳಿದಿದ್ದ ಬ್ಯಾಂಕ್ ಅಧಿಕಾರಿಗಳು, ಸಾಲ ಮಂಜೂರು ಮಾಡಿದ್ದರು. ಅದಾಗಿ ಕೆಲ ವರ್ಷಗಳ ನಂತರ ಸಾಲದ ಕಂತುಗಳನ್ನು ತುಂಬುವುದನ್ನು ಬಂದ್ ಮಾಡಿದ್ದರು. ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ, ದಾಖಲೆಗಳ ಪರಿಶೀಲನೆ ನಡೆಸಿದಾಗ ವಂಚನೆ ಮಾಡಿದ್ದು ಗಮನಕ್ಕೆ ಬಂದಿತ್ತು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.