ADVERTISEMENT

ಗುಣಮುಖವಾದ ನಂತರವೂ ಎಚ್ಚರ ತಪ್ಪಿಲ್ಲ: ಕೋವಿಡ್‌ ಜಯಿಸಿದ ದಿವ್ಯಾ ಅನುಭವ

ಕೋವಿಡ್‌ ಜಯಿಸಿದ ದಿವ್ಯಾ ಅನುಭವ

​ಪ್ರಜಾವಾಣಿ ವಾರ್ತೆ
Published 3 ಮೇ 2021, 19:30 IST
Last Updated 3 ಮೇ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ಕೋವಿಡ್‌ ಪಾಸಿಟಿವ್‌ ಆದರೂ ನನಗೆ ಸೋಂಕಿನ ಸೌಮ್ಯ ಲಕ್ಷಣಗಳು ಇದ್ದವು. ಹೋಂ ಐಸೊಲೇಷನ್‌ನಲ್ಲಿರಲು ವೈದ್ಯರು ಹೇಳಿದ್ದರು. ಅದರಂತೆ 15 ದಿನ ಮನೆಯಲ್ಲಿಯೇ ಪ್ರತ್ಯೇಕವಾಗಿದ್ದುಕೊಂಡು ಆರೈಕೆ ಮಾಡಿಕೊಳ್ಳಲು ಹೇಳಿದ್ದರು’ ಎಂದು ನಗರದ ಎಸ್.ಪಿ. ದಿವ್ಯಾ ಹೇಳಿದರು.

‘ಏ.8ರಂದು ನನಗೆ ಜ್ವರ ಬಂದಿತ್ತು. ಒಂದೆರಡು ದಿನ ಹಾಗೆಯೇ ಇತ್ತು. 12ಕ್ಕೆ ಕಚೇರಿಗೆ ಹೋಗಿದ್ದೆ. ಕೆಲಸ ಮಾಡುವಾಗ ತುಂಬಾ ಸುಸ್ತು ಎನಿಸಿತು. ಮಧ್ಯಾಹ್ನ ಊಟ ಸೇರಲಿಲ್ಲ. ಜ್ವರ ಕಡಿಮೆಯಾಗಿದ್ದರೂ ಮೈ ಕೈ ನೋಯುತ್ತಿತ್ತು. 13ರಂದು ಪರೀಕ್ಷೆ ಮಾಡಿಸಿದೆ. 14ರಂದು ಕೋವಿಡ್‌ ಪಾಸಿಟಿವ್ ಎಂದು ವರದಿ ಬಂತು’

‘ಮನೆಯಲ್ಲಿ ಪತಿ ಮತ್ತು ಮಗಳು ಪರೀಕ್ಷೆ ಮಾಡಿಸಿದಾಗ ಅವರಿಗೆ ನೆಗೆಟಿವ್ ಎಂದು ಬಂದಿತ್ತು. ನನ್ನಿಂದ ಅವರಿಗೂ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ತುಂಬಾ ಎಚ್ಚರಿಕೆ ವಹಿಸಿದೆ. ತಟ್ಟೆ, ಲೋಟ ಸೇರಿದಂತೆ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಇಟ್ಟುಕೊಂಡಿದ್ದೆ. ಶೌಚಾಲಯ ಬಳಸಿದ ನಂತರ ತಪ್ಪದೇ ಸ್ಯಾನಿಟೈಸ್ ಮಾಡುತ್ತಿದ್ದೆ’

ADVERTISEMENT

‘ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅಲ್ಲಿಯೇ ವೈದ್ಯರು, ಶುಶ್ರೂಷಕರು ಇರುತ್ತಾರೆ. ಗೊಂದಲಗಳಿದ್ದರೆ ಅಲ್ಲಿಯೇ ಪರಿಹರಿಸಿಕೊಳ್ಳಬಹುದು. ಮನೆಯಲ್ಲಿಯೇ ಆರೈಕೆ ಮಾಡಿಕೊಳ್ಳುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ’

‘ಪ್ರಾರಂಭದಲ್ಲಿ ವಾಸನೆ ಮತ್ತು ರುಚಿಯೇ ಗೊತ್ತಾಗುತ್ತಿರಲಿಲ್ಲ. ಬೆಳಿಗ್ಗೆ 5, ಮಧ್ಯಾಹ್ನ 2 ಮತ್ತು ರಾತ್ರಿ 5 ಹೀಗೆ ದಿನಕ್ಕೆ 12 ಮಾತ್ರೆಗಳನ್ನು ಸೇವಿಸಬೇಕಾಗುತ್ತಿತ್ತು. ಹಸಿವು ಆಗುತ್ತಿರಲಿಲ್ಲ. ದೇಹದ ಉಷ್ಣಾಂಶ ಮತ್ತು ಆಮ್ಲಜನಕ ಮಟ್ಟ ಪರೀಕ್ಷಿಸಿಕೊಳ್ಳುವ ಸಾಧನಗಳನ್ನು ತಂದಿಟ್ಟುಕೊಂಡಿದ್ದೆ. ಆಮ್ಲಜನಕ ಮಟ್ಟ 92ಕ್ಕಿಂತ ಕಡಿಮೆಯಾದರೆ ಆಸ್ಪತ್ರೆಗೆ ದಾಖಲಾಗಿ ಎಂದು ವೈದ್ಯರು ಹೇಳಿದ್ದರು. ಆದರೆ, 15 ದಿನಗಳೂ ನನ್ನ ಆಮ್ಲಜನಕ ಮಟ್ಟ 96ರಿಂದ 98ರಲ್ಲೇ ಇತ್ತು’

‘ಏನೇ ತಿಂದರೂ ರುಚಿಸುತ್ತಿರಲಿಲ್ಲ. ಮೋಸಂಬಿ, ದ್ರಾಕ್ಷಿ, ಸಪೋಟಾ, ದಾಳಿಂಬೆ ಹಣ್ಣು ಹೆಚ್ಚು ಸೇವಿಸುತ್ತಿದ್ದೆ. ಹೆಚ್ಚು ಮಾತ್ರೆಗಳು ತೆಗೆದುಕೊಳ್ಳುತ್ತಿದ್ದುದರಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತಿತ್ತು. ಮಜ್ಜಿಗೆ, ಮೊಸರು ಹೆಚ್ಚು ಸೇವಿಸಿದರೆ ಕಫ ಉಂಟಾಗಿ ಉಸಿರಾಟಕ್ಕೆ ಸಮಸ್ಯೆಯಾಗಬಹುದು ಉದ್ದೇಶದಿಂದ ಎಳನೀರು ಹೆಚ್ಚು ಕುಡಿಯುತ್ತಿದ್ದೆ’ ಎಂದರು.

‘12, 13 ದಿನಗಳು ಕಳೆದ ನಂತರ ವಾಸನೆ ಮತ್ತು ರುಚಿ ಗೊತ್ತಾಗತೊಡಗಿತು. ಯಾವುದೇ ಸುಸ್ತು ಕಾಣಲಿಲ್ಲ. ವೈದ್ಯರಿಗೆ ಕರೆ ಮಾಡಿದಾಗ, ನೀವು ಗುಣಮುಖರಾಗಿದ್ದೀರಿ. ಆದರೆ, ಈಗಲೇ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಡಿ. ಈಗ ಪರೀಕ್ಷೆ ಮಾಡಿಸಿದರೆ ಕೋವಿಡ್ ಪಾಸಿಟಿವ್‌ ಎಂದೇ ಬರಬಹುದು. ಸೋಂಕಿನ ಲಕ್ಷಣಗಳು ಮತ್ತೆ ಕಾಣಿಸಿಕೊಂಡರೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು’

‘ಈಗಲೂ ನಾನು ಮನೆಯಲ್ಲಿಯೇ ಪ್ರತ್ಯೇಕವಾಗಿಯೇ ಇದ್ದೇನೆ. ಹಾಲ್‌ಗೆ ಹೋದರೂ ನಿರ್ದಿಷ್ಟ ಜಾಗದಲ್ಲಿ ಮಾತ್ರ ಕುಳಿತುಕೊಳ್ಳುತ್ತೇನೆ. ಮನೆಯ ಮಂದಿಯೆಲ್ಲ ನಿತ್ಯ ಈಗಲೂ ವಿಟಮಿನ್ ಸಿ ಮಾತ್ರೆ ತೆಗೆದುಕೊಳ್ಳುತ್ತಿದ್ದೇವೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.