ADVERTISEMENT

ಗೋಡೆ ಕೊರೆದು 5 ಕೆ.ಜಿ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2022, 3:18 IST
Last Updated 21 ಏಪ್ರಿಲ್ 2022, 3:18 IST
   

ಬೆಂಗಳೂರು: ಜೆ.ಪಿ. ನಗರ ಒಂದನೇ ಹಂತದ 14ನೇ ಅಡ್ಡರಸ್ತೆಯಲ್ಲಿರುವ ‘ಪ್ರಿಯದರ್ಶಿನಿ ಜ್ಯುವೆಲರ್ಸ್’ ಮಳಿಗೆಯ ಗೋಡೆ ಕೊರೆದು 5 ಕೆ.ಜಿ ಚಿನ್ನಾಭರಣ ಕಳ್ಳತನ ಮಾಡಲಾಗಿದ್ದು, ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ.

‘ಏಪ್ರಿಲ್ 17ರಂದು ರಾತ್ರಿ ಕಳ್ಳತನ ನಡೆದಿದ್ದು, ಮಳಿಗೆ ಮಾಲೀಕ ಕೆ. ರಾಜು ದೇವಾಡಿಗ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕನಕಪುರ ಮುಖ್ಯರಸ್ತೆಯ ಮೆಟ್ರೊ ನಿಲ್ದಾಣ ಸಮೀಪದಲ್ಲಿ ಮಳಿಗೆ ಇದೆ. ಏಪ್ರಿಲ್ 17ರಂದು ಎಂದಿನಂತೆ ವ್ಯಾಪಾರ ಮುಗಿಸಿದ್ದ ಮಾಲೀಕ, ರಾತ್ರಿ 7 ಗಂಟೆಗೆ ಬೀಗ ಹಾಕಿಕೊಂಡು ಮನೆಗೆ ಹೋಗಿದ್ದರು. ಮರುದಿನ ಬೆಳಿಗ್ಗೆ 10 ಗಂಟೆಗೆ ಮಳಿಗೆಗೆ ಬಂದು ಬೀಗ ತೆರೆದು ನೋಡಿದಾಗ ಕಳ್ಳತನ ಗಮನಕ್ಕೆ ಬಂದಿದೆ’ ಎಂದೂ ತಿಳಿಸಿವೆ.

ADVERTISEMENT

ವ್ಯವಸ್ಥಿತ ಕಳ್ಳತನ: ‘ಹಲವು ದಿನಗಳಿಂದ ಸಂಚು ರೂಪಿಸಿದ್ದ ಆರೋಪಿಗಳು, ವ್ಯವಸ್ಥಿತವಾಗಿ ಕೃತ್ಯ ಎಸಗಿದ್ದಾರೆ. ಡ್ರಿಲ್ಲಿಂಗ್‌ ಯಂತ್ರ ಬಳಸಿ ಗೋಡೆ ಕೊರೆದು ಮಳಿಗೆಯೊಳಗೆ ರಾತ್ರಿ ನುಗ್ಗಿದ್ದರು. ಗ್ಯಾಸ್‌ ಕಟರ್‌ ಬಳಸಿ ಕಬ್ಬಿಣದ ಸರಳು ಹಾಗೂ ಲಾಕರ್‌ ಕತ್ತರಿಸಿದ್ದಾರೆ. ನಂತರ, ಲಾಕರ್‌ನಲ್ಲಿಟ್ಟಿದ್ದ ₹ 2.50 ಕೋಟಿ ಮೌಲ್ಯದ 5 ಕೆ.ಜಿ ತೂಕದ ಚಿನ್ನಾಭರಣಗಳನ್ನು ಕದ್ದುಕೊಂಡು ಹೋಗಿರುವುದು ಗೊತ್ತಾಗಿದೆ’ ಎಂದೂ ತಿಳಿಸಿವೆ.

‘ಬಹುಮಹಡಿ ಕಟ್ಟಡದ ನೆಲಮಹಡಿಯಲ್ಲಿ ಮಳಿಗೆ ಇದೆ. ಅದರ ಮೇಲೆ ಮೂರು ಮಹಡಿಗಳಿವೆ. ಮೂರನೇ ಮಹಡಿಯ ಮನೆಗೆ ಇತ್ತೀಚೆಗೆ ಅಪರಿಚಿತರು ಬಂದಿದ್ದರು. ಸದ್ಯ ಅವರು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.