ADVERTISEMENT

ಹೈಕೋರ್ಟ್‌ನಲ್ಲಿ ಬಾಂಬ್‌ ಸ್ಫೋಟಿಸುವ ಬೆದರಿಕೆ: ಮಾವನ ಸಿಲುಕಿಸಲು ಹೋಗಿ ಜೈಲುಪಾಲಾದ

ಹೈಕೋರ್ಟ್‌ನಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಪತ್ರ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 6:25 IST
Last Updated 5 ಅಕ್ಟೋಬರ್ 2019, 6:25 IST
ರಾಜೇಂದ್ರ ಸಿಂಗ್
ರಾಜೇಂದ್ರ ಸಿಂಗ್   

ಬೆಂಗಳೂರು:ಹೈಕೋರ್ಟ್ ಕಟ್ಟಡದಲ್ಲಿ ಬಾಂಬ್‌ ಸ್ಫೋಟಿಸುವುದಾಗಿ ಬೆದರಿಕೆ ಪತ್ರ ಬರೆದಿದ್ದ ಆರೋಪದಡಿ ಉತ್ತರ ಪ್ರದೇಶದರಾಜೇಂದ್ರ ಸಿಂಗ್ (36) ಎಂಬಾತನನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

‘ದೆಹಲಿಯ ಹರದರ್ಶನ್ ಸಿಂಗ್ ನಾಗಪಾಲ್ ಎಂಬುವರ ಹೆಸರಿನಲ್ಲಿ ಪತ್ರ ಬರೆದಿದ್ದ ಆರೋಪಿ, ‘ನಾನು ಇಂಟರ್‌ ನ್ಯಾಷನಲ್‌ ಖಲಿಸ್ತಾನ್ ಬೆಂಬಲಿಗ ಗ್ರೂಪ್‌ನ ಸದಸ್ಯ. ಸೆಪ್ಟೆಂಬರ್ 30ರಂದು ಮಗನೊಂದಿಗೆ ಸೇರಿ ಹೈಕೋರ್ಟ್ ಕಟ್ಟಡದ ಹಲವು ಕಡೆಗಳಲ್ಲಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಬೆದರಿಕೆ ಹಾಕಿದ್ದ.

ಪತ್ರದ ಸಂಬಂಧ ಹೈಕೋರ್ಟ್ಭದ್ರತಾ ವಿಭಾಗದ ಎನ್. ಕುಮಾರ್ ಅವರು ಸೆ. 18ರಂದು ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

‘ಪತ್ರದಲ್ಲಿ ಹೆಸರಿದ್ದ ಹರದರ್ಶನ್‌ ಸಿಂಗ್, ದೆಹಲಿಯಲ್ಲಿ ತಿಂಡಿ– ತಿನಿಸು ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಅವರನ್ನು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಲಾಯಿತು. ತನ್ನನ್ನು ಹಾಗೂ ಮಗನನ್ನು ಜೈಲಿಗೆ ಕಳುಹಿಸುವುದಕ್ಕಾಗಿ ಅಳಿಯ ರಾಜೇಂದ್ರ ಸಿಂಗ್‌ನೇ ಕೃತ್ಯ ಎಸಗಿರುವುದಾಗಿ ಅವರು ತಿಳಿಸಿದ್ದರು.’

‘ಮಾವನ ಹೆಸರಿನಲ್ಲಿ ರಾಜೇಂದ್ರಸಿಂಗ್, ಚೆನ್ನೈ ಹೈಕೋರ್ಟ್‌ಗೂ ಬೆದರಿಕೆ ಪತ್ರ ಕಳುಹಿಸಿದ್ದ. ಆತನನ್ನು ಚೆನ್ನೈ ಪೊಲೀಸರು ಕೆಲ ದಿನಗಳ ಹಿಂದೆಯೇ ಬಂಧಿಸಿದ್ದರು. ಸ್ಥಳೀಯ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ಆರೋಪಿಯನ್ನು ಕಸ್ಟಡಿಗೆ ಪಡೆದು ನಗರಕ್ಕೆ ಕರೆತರಲಾಗಿದೆ’ ಎಂದು ಅಧಿಕಾರಿ ವಿವರಿಸಿದರು.

ಮನೆಬಿಟ್ಟು ಹೋಗಿದ್ದ ಪತ್ನಿ: ‘ಹರದರ್ಶನ್‌ ಸಿಂಗ್ ಅವರ ಮಗಳನ್ನು ಆರೋಪಿ ರಾಜೇಂದ್ರ ಸಿಂಗ್‌ ಮದುವೆ ಆಗಿದ್ದ. ಕೌಟುಂಬಿಕ ಕಲಹದಿಂದಾಗಿ ಪತ್ನಿ ಆತನನ್ನು ಬಿಟ್ಟು ಹೋಗಿದ್ದಳು. ವಾಪಸ್‌ ಕಳುಹಿಸಲು ಹರದರ್ಶನ್ ಸಿಂಗ್ ಹಿಂದೇಟು ಹಾಕುತ್ತಿದ್ದರು’ ಎಂದು ಹಿರಿಯ ಅಧಿಕಾರಿ ಹೇಳಿದರು.

‘ಹೇಗಾದರೂ ಮಾಡಿ ಮಾವನನ್ನು ಜೈಲಿಗೆ ಕಳುಹಿಸಿ ಪತ್ನಿಯನ್ನು ತನ್ನ ಮನೆಗೆ ವಾಪಸ್‌ ಕರೆದುಕೊಂಡು ಬರಬೇಕೆಂದು ಅಂದುಕೊಂಡು ಆರೋಪಿ ಈ ಕೃತ್ಯ ಎಸಗಿದ್ದ. ಮಾವನ ಹೆಸರಿನಲ್ಲೇ ಹಲವು ರಾಜ್ಯಗಳ ಹೈಕೋರ್ಟ್‌ಗೆ ಪತ್ರ ಬರೆದಿದ್ದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.