ADVERTISEMENT

ಬಾಲಕಿ ಪೂಜಾ ಆತ್ಮಹತ್ಯೆ ಧಾರಾವಾಹಿ ಪ್ರಭಾವ?

ರಾತ್ರಿಯೂ ಟಿ.ವಿ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಮೇ 2019, 20:28 IST
Last Updated 7 ಮೇ 2019, 20:28 IST
ಪೂಜಾ
ಪೂಜಾ   

ಬೆಂಗಳೂರು: ಬಾಗಲಗುಂಟೆ ಸಮೀಪದ ಮಲ್ಲಸಂದ್ರದಲ್ಲಿ ಪೂಜಾ (11) ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಧಾರಾವಾಹಿಯಿಂದ ಪ್ರಚೋದನೆಗೆ ಒಳಗಾಗಿ ಆಕೆ ನೇಣು ಹಾಕಿಕೊಂಡಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

ಗೋಬಿ ಮಂಚೂರಿ ವ್ಯಾಪಾರ ಮಾಡುವ ರಂಗೇಗೌಡ, ಶಾರದಾ ದಂಪತಿ ಮಗಳಾದ ಪೂಜಾ, ಮನೆ ಸಮೀಪದ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು.

ಎಂದಿನಂತೆ ಸೋಮವಾರ ಸಂಜೆ ದಂಪತಿ ವ್ಯಾಪಾರಕ್ಕೆ ತೆರಳಿದ್ದರು. 7 ಗಂಟೆವರೆಗೂ ಅವರ ಜತೆಗೇ ಇದ್ದ ಪೂಜಾ, ನಂತರ ಮನೆಗೆ ವಾಪಸಾಗಿದ್ದಳು. 8 ಗಂಟೆ ಸುಮಾರಿಗೆ ಪಕ್ಕದ ಮನೆಯ ಮಹಿಳೆಯೊಬ್ಬರು ಆಕೆಯನ್ನು ನೋಡಿದ್ದರು. ಆನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ವಹಿವಾಟು ಮುಗಿಸಿ ಪೋಷಕರು 9 ಗಂಟೆ ಸುಮಾರಿಗೆ ಮನೆಗೆ ಮರಳಿದಾಗ ಗೊತ್ತಾಗಿದೆ. ಬಟ್ಟೆ ನೇತು ಹಾಕುವ ಹುಕ್ಕಿಗೆ ಟವೆಲ್ ಕಟ್ಟಿ ನೇಣು ಹಾಕಿಕೊಂಡಿದ್ದಳು. ಪೋಷಕರು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು.

‌ಧಾರಾವಾಹಿಯ ಪ್ರಭಾವ?: ಆಂಧ್ರಪ್ರದೇಶದ ದಂಪತಿ, 15 ವರ್ಷಗಳಿಂದ ನಗರದಲ್ಲೇ ನೆಲೆಸಿದ್ದರು. ಧಾರಾವಾಹಿಗಳನ್ನು ಹೆಚ್ಚಾಗಿ ನೋಡುತ್ತಿದ್ದ ಪೂಜಾ, ರಾತ್ರಿಯೂ ತಾಯಿಗೆ ಅದೇ ಕಾರಣ ಹೇಳಿ ಮನೆಗೆ ಮರಳಿದ್ದಳು. ಪೋಷಕರು ಮನೆಗೆ ವಾಪಸಾದಾಗಲೂ ಟಿ.ವಿ ಚಾಲೂ ಇತ್ತು. ಉದಯ ವಾಹಿನಿಯಲ್ಲಿ ಧಾರಾವಾಹಿ ಕೂಡ ಪ್ರಸಾರವಾಗುತ್ತಿತ್ತು ಎನ್ನಲಾಗಿದೆ.

‘ಬಾಲಕಿ ಮನೆಯಲ್ಲಿದ್ದಾಗ ಹೊರಗಿನ ವ್ಯಕ್ತಿಗಳು ಯಾರೂ ಬಂದು ಹೋಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೂ, ಅದು ಆತ್ಮಹತ್ಯೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಧಾರಾವಾಹಿಯ ಯಾವುದೋ ಒಂದು ದೃಶ್ಯದಿಂದ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿರಬಹುದು. ಹೀಗಾಗಿ, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ’ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.