ADVERTISEMENT

₹30 ಲಕ್ಷ ಮೌಲ್ಯದ ಚಿನ್ನಾಭರಣ ವಶ: ಆರು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 18:46 IST
Last Updated 6 ಜನವರಿ 2021, 18:46 IST
ಪೊಲೀಸರು ಜಪ್ತಿ ಮಾಡಿರುವ ಚಿನ್ನಾಭರಣ ಹಾಗೂ ವಸ್ತುಗಳು.
ಪೊಲೀಸರು ಜಪ್ತಿ ಮಾಡಿರುವ ಚಿನ್ನಾಭರಣ ಹಾಗೂ ವಸ್ತುಗಳು.   

ಬೆಂಗಳೂರು: ಮೋಜಿನ ಜೀವನ ನಡೆಸಲು ಹಗಲು ಮತ್ತು ರಾತ್ರಿ ವೇಳೆ ಮನೆಗಳಿಗೆ ನುಗ್ಗಿ, ಚಿನ್ನಾಭರಣ ಕದಿಯುತ್ತಿದ್ದ ಆರು ಆರೋಪಿಗಳನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರದ ಕೆಂಚಪ್ಪ (34), ಮಹಮ್ಮದ್ ಇಬ್ರಾಹಿಂ (36), ಬೆಂಗಳೂರಿನ ಹರೀಶ್ (27), ನವೀನ್ (31), ವೆಂಕಟೇಶ್ ಕುಮಾರ್‌ (34), ಜೇಮ್ಸ್‌ (35) ಬಂಧಿತರು.

ಆರೋಪಿಗಳಿಂದ ₹30 ಲಕ್ಷ ಬೆಲೆಬಾಳುವ ಚಿನ್ನಾಭರಣ, 1,495 ಗ್ರಾಂ ಬೆಳ್ಳಿ ಸಾಮಗ್ರಿಗಳು, ಮೂರು ಲ್ಯಾಪ್‌ಟಾಪ್‌, ಟ್ಯಾಬ್‌, 11 ಕೈಗಡಿಯಾರಗಳು, ಒಂದು ಆಟೊ, ಎರಡು ಕಾರುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ADVERTISEMENT

ನಗರದ ಜಿ.ಕೆ.ಡಬ್ಲ್ಯು ಬಡಾವಣೆಯ ಮನೆಯೊಂದರಲ್ಲಿ ಡಿಸೆಂಬರ್‌ನಲ್ಲಿ ನಡೆದಿದ್ದ ಕಳ್ಳತನ ಸಂಬಂಧ ದೂರು ದಾಖಲಾಗಿತ್ತು.

‘ಬೀಗ ಹಾಕಲಾಗಿರುವ ಮನೆಗಳಿಗೆ ಆರೋಪಿಗಳು ರಾತ್ರಿ ವೇಳೆ ನುಗ್ಗುತ್ತಿದ್ದರು. ಬೀಗಗಳನ್ನು ಮುರಿದು ಮನೆಗಳನ್ನು ಪ್ರವೇಶಿಸುತ್ತಿದ್ದರು. ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ, ಅದರಿಂದ ಬರುವ ಹಣದಲ್ಲಿ ಮೋಜು ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿಗಳು ಈ ಹಿಂದೆಯೇ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಬಿಡುಗಡೆ ನಂತರವೂ ತಂಡ ಕಟ್ಟಿಕೊಂಡು ಕಳ್ಳತನ ಮಾಡುತ್ತಿದ್ದರು. ಆರೋಪಿಗಳ ಬಂಧನದಿಂದ ರಾಜಗೋಪಾಲನಗರ, ನಂದಿನಿ ಬಡಾವಣೆ, ಮುಳಬಾಗಿಲು, ಹಾಸನ ಠಾಣೆಗಳಲ್ಲಿ ಕಳವು ಪ್ರಕರಣಗಳು ಪತ್ತೆಯಾಗಿವೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.