ADVERTISEMENT

ಪೊಲೀಸ್‌ ಠಾಣೆಯಲ್ಲಿದ್ದ ದಾಖಲೆಗಳೇ ಕಳವು!

ಮಣಿಪಾಲ್ ಗ್ರೂಪ್‌ಗೆ ₹ 62 ಕೋಟಿ ವಂಚಿಸಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2019, 20:01 IST
Last Updated 27 ಏಪ್ರಿಲ್ 2019, 20:01 IST

ಬೆಂಗಳೂರು: ಮಣಿಪಾಲ್ ಎಜ್ಯುಕೇಷನ್ ಹಾಗೂ ಮೆಡಿಕಲ್ ಗ್ರೂಪ್‌ಗೆ ₹ 62 ಕೋಟಿ ವಂಚಿಸಿದ್ದ ಪ್ರಕರಣದ ತನಿಖೆಯ ದಾಖಲೆಗಳು, ಕಬ್ಬನ್ ಪಾರ್ಕ್‌ ಪೊಲೀಸ್ ಠಾಣೆಯಿಂದಲೇ ಕಳುವಾಗಿವೆ.

ಆ ಸಂಬಂಧ ತನಿಖಾಧಿಕಾರಿಯೂ ಆದ ಇನ್‌ಸ್ಪೆಕ್ಟರ್‌ ಐಯ್ಯಣ್ಣ ರೆಡ್ಡಿ ಅವರು ದೂರು ನೀಡಿದ್ದು, ಅದರನ್ವಯ ಎಫ್‌ಐಆರ್ ದಾಖಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ಅವರು ಪ್ರತ್ಯೇಕ ತಂಡವೊಂದನ್ನು ರಚಿಸಿ ತನಿಖೆ ನಡೆಸುತ್ತಿದ್ದಾರೆ.

‘ಪ್ರಕರಣದ ಮಹಜರು, ಆರೋಪಿಗಳ ಬ್ಯಾಂಕ್ ಖಾತೆ ವಿವರ ಸೇರಿದಂತೆ 10ಕ್ಕೂ ಹೆಚ್ಚು ಅಸಲಿ ದಾಖಲೆಗಳನ್ನು ಠಾಣೆಯಲ್ಲಿ ಇರಿಸಲಾಗಿತ್ತು. ಯಾರೋ ಅಪರಿಚಿತರು, ಆ ದಾಖಲೆಗಳನ್ನೇ ಕದ್ದುಕೊಂಡು ಹೋಗಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಮಾಡಿ ದಾಖಲೆಗಳನ್ನು ಹುಡುಕಿಕೊಡಿ’ ಎಂದು ದೂರಿನಲ್ಲಿ ಐಯ್ಯಣ್ಣ ರೆಡ್ಡಿ ಕೋರಿದ್ದಾರೆ.

ADVERTISEMENT

ಜಾಮೀನಿಗೆ ಅನುಕೂಲವಾಗಲೆಂದು ಕೃತ್ಯ: ‘ವಂಚನೆ ಪ್ರಕರಣ ಸಂಬಂಧ ಮಣಿಪಾಲ್ ಎಜ್ಯುಕೇಷನ್ ಹಾಗೂ ಮೆಡಿಕಲ್ ಗ್ರೂಪ್‌ನ ನಿರ್ದೇಶಕರು ಕಳೆದ ಡಿ. 26ರಂದು ದೂರು ನೀಡಿದ್ದರು. ತನಿಖೆ ನಡೆಸಿದ್ದ ತನಿಖಾಧಿಕಾರಿ, ಅದೇ ಗ್ರೂಪ್‌ನ ಉಪ ಪ್ರಧಾನ ವ್ಯವಸ್ಥಾಪಕ ಸಂದೀಪ್ ಗುರುರಾಜ್ (38) ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ತನಿಖೆ ಮುಂದುವರಿಸಿ ಹಲವು ದಾಖಲೆಗಳನ್ನು ತನಿಖಾಧಿಕಾರಿ ಸಂಗ್ರಹಿಸಿದ್ದರು. ಅತ್ತ, ಆರೋಪಿಯ ಜಾಮೀನು ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು’ ಎಂದು ಹೇಳಿದರು.

‘90 ದಿನದೊಳಗೆದೋಷಾರೋಪ ಪಟ್ಟಿ ಸಲ್ಲಿಸಬೇಕು. ದಾಖಲೆಗಳನ್ನು ಕದ್ದರೆ, ನಿಗದಿತ ದಿನದಂದು ದೋಷಾರೋಪ ಪಟ್ಟಿ ಸಲ್ಲಿಸಲು ಆಗುವುದಿಲ್ಲ. ಅದೇ ಕಾರಣವನ್ನು ಮುಂದಿಟ್ಟುಕೊಂಡು ನ್ಯಾಯಾಲಯದಿಂದ ಆರೋಪಿಗೆ ಜಾಮೀನು ಕೊಡಿಸಬಹುದು ಎಂಬ ಉದ್ದೇಶದಿಂದ ಕಾಣದ ಕೈಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಕೃತ್ಯದಲ್ಲಿ ಠಾಣೆಯಲ್ಲಿರುವ ಸಿಬ್ಬಂದಿಯ ಕೈವಾಡವಿರುವ ಶಂಕೆ ಇದೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಪಡೆದಿರುವ ಅನುಮಾನವೂ ಇದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಮಾಡುತ್ತೇವೆ. ಅಸಲಿ ದಾಖಲೆಗಳು ಕಳುವಾದ ಮಾತ್ರಕ್ಕೆ ಆರೋಪಿಗೆ ಅನುಕೂಲವಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.